ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಬೆಣ್ಣೆರೆ ಶ್ರೀ ನಾಗ ದೇವಸ್ಥಾನದಲ್ಲಿ ಅಷ್ಟಬಂಧ ಪೂರ್ವಕ ಶ್ರೀ ನಾಗದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶೃಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಹಾಗೂ ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಪರಮಾನುಗ್ರಹದೊಂದಿಗೆ ಮಾ.26ರಂದು ನಡೆಯಲಿದೆ. ಸುವರ್ಣ ಮಹೋತ್ಸವ ಪ್ರಯುಕ್ತ ಸಾರ್ವಜನಿಕ ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ ಮಾ.31ರಂದು ಜರುಗಲಿದೆ.
ಗುಜ್ಜಾಡಿ ಗ್ರಾಮದ ಬೆಣ್ಣೆರೆ ಶ್ರೀ ನಾಗ ದೇವಸ್ಥಾನದಲ್ಲಿ ಶ್ರೀ ನಾಗ ದೇವರ ಅಷ್ಟಬಂಧ ಪೂರ್ವಕ ಪುನರ್ ಪ್ರತಿಷ್ಠೆ ನಾನಾ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ‘ಮೀನ ಲಗ್ನ ಸುಮುಹೂರ್ತದಲ್ಲಿ ಬೆಳಗ್ಗೆ 6.15ಕ್ಕೆ ನಡೆಯಲಿದೆ. ಗುರುಗಣಪತಿ ಪೂಜೆ ಜೀವ ಕುಂಭಾಭಿಷೇಕ, ಪ್ರತಿಷ್ಠಾ ಕಲಶಾಭಿಷೇಕ, ಕಲಶಾಧಿ ವಾಸ ಹೋಮ, ಪ್ರಾಯಶ್ಚಿತ ಹೋಮ, ಶ್ರೀ ನಾಗ ದೇವರಿಗೆ ಬೆಳ್ಳಿ ಪ್ರಭಾವಳಿ ಮತ್ತು ಪೀಠ ಸಮರ್ಪಣೆ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ 11 ಗಂಟೆಗೆ ಶೃಂಗೇರಿ ಮಠ ಶ್ರೀ ವಿಧುಶೇಖರ ಭಾರತೀ ಮಹಾ ಸ್ವಾಮಿ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಸಮಿತಿಯವರು ದೇವಸ್ಥಾನಕ್ಕೆ ಬರಮಾಡಿ ಕೊಳ್ಳಲಿದ್ದಾರೆ. ನಂತರ ಶ್ರೀಗಳ ಉಪಸ್ಥಿತಿಯಲ್ಲಿ ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ಮಹಾಪೂಜೆ, ಜಗದ್ಗುರುಗಳ ಆಶೀರ್ವಚನ ಹಾಗೂ ಫಲ ಮಂತ್ರಾಕ್ಷತೆ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ರಾತ್ರಿ 7.30 ಕ್ಕೆ ಶ್ರೀ ದೇವರಿಗೆ ರಂಗಪೂಜೆ ಜರುಗಲಿದೆ.
ಮಾ. 29 ರಂದು ಹೊರೆಕಾಣಿಕೆ ಮೆರವಣಿಗೆ: ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯ ಕ್ರಮದ ಅಂಗವಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆ ಸಂಜೆ 4 ಗಂಟೆಗೆ ತ್ರಾಸಿ, ಗಂಗೊಳ್ಳಿ, ಗುಜ್ಜಾಡಿ ಮಾರ್ಗವಾಗಿ ಸಾಗಲಿದೆ.
31ರಂದು ಅಷ್ಟಪವಿತ್ರ ನಾಗಮಂಡಲೋತ್ಸವ: ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಬೆಣ್ಗೇರೆ ಶ್ರೀ ನಾಗ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುತ್ತಾ ಬಂದಿರುವ ನಾಗಮಂಡಲೋತ್ಸವ ಕಾರ್ಯಕ್ರಮದ ಸುವರ್ಣ ಮಹೋತ್ಸವ ಪ್ರಯುಕ್ತ ಶ್ರೀ ನಾಗದೇವರ ಸನ್ನಿಧಾನದಲ್ಲಿ ಮಾ.31ರಂದು ಸಾರ್ವಜನಿಕ ಅಷ್ಟಪವಿತ್ರ ನಾಗಮಂಡಲೋತ್ಸವ, ಹಾಲಿಟ್ಟು ಸೇವೆ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನ ಗಳೊಂದಿಗೆ ನಡೆಯಲಿದೆ ಎಂದು ದೇವಸ್ಥಾನದ ಸಮಿತಿಯವರು ತಿಳಿಸಿದ್ದಾರೆ.