ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ಪ್ರದೀಪ್ತಿ -2024
2023-24 ನೇ ಸಾಲಿನ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ
ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 493 ವಿದ್ಯಾರ್ಥಿಗಳಿಗೆ ಸನ್ಮಾನ
“ವಿದ್ಯಾರ್ಥಿಗಳು ಯಥೇಚ್ಛವಾಗಿ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಈ ಮೂಲಕ ನಮ್ಮ ನೆಲದ ಗತ ಇತಿಹಾಸವನ್ನು ತಿಳಿದುಕೊಂಡು ಭವ್ಯ ಭಾರತದ ದಿವ್ಯ ಪ್ರಜೆಗಳಾಗಬೇಕು. ಭರತ ಭೂಮಿಯ ವಿಶಿಷ್ಟ ಸಂಸ್ಕೃತಿಯ ವಾರಸುದಾರರಾದ ಪ್ರತಿಯೊಬ್ಬನೂ ಈ ಮಣ್ಣನ್ನು ಪ್ರೀತಿಸಿ, ಗೌರವಿಸುವಂತಾಗಬೇಕು” ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಇವರು ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆದ “ವಿವೇಕ ಪ್ರದೀಪ್ತಿ 2024”-ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ “ಭಾರತದ ಭವಿಷ್ಯ ನೆಲೆನಿಂತಿರುವುದೇ ಪದವಿಪೂರ್ವ ವಿದ್ಯಾರ್ಥಿಗಳಲ್ಲಿ. ಅರಿವು,ಜ್ಞಾನದ ಅಗತ್ಯತೆ ಇರುವ ಈ ಹಂತವು ಒಬ್ಬ ವಿದ್ಯಾರ್ಥಿಯನ್ನು ಸಂಪೂರ್ಣ ಜ್ಞಾನಿಯನ್ನಾಗಿಸಬಹುದು. ದಕ್ಷಿಣ ಕನ್ನಡ ಜಿಲ್ಲೆ ಸಾಧ್ಯತೆಗಳ ಸಾಗರವಾಗಿದೆ. ಸಾಧಕ ವಿದ್ಯಾರ್ಥಿಯೊಬ್ಬನಿಗೆ ಅಭಿನಂದನೆ ಸಲ್ಲಿಸಲ್ಪಡುತ್ತದೆ ಎಂದಾದರೆ ಅವನ ಕಠಿಣ ಪರಿಶ್ರಮವೇ ಇದಕ್ಕೆ ಕಾರಣವಾಗಿರುತ್ತದೆ. ವಿದ್ಯಾರ್ಥಿಗಳು ಗುರಿಯ ಸ್ಪಷ್ಟತೆಯೊಂದಿಗೆ ಮುಂದುವರಿಯಬೇಕು” ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ .ಪಿ ಇವರು “ಶಿಕ್ಷಣ ಸಂಸ್ಥೆಗಳು ಇಂದು ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಹೃದಯವಂತಿಕೆಯನ್ನು ತುಂಬಿ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವ ಮೌಲ್ಯಯುತವಾದ ಶಿಕ್ಷಣವನ್ನು ನೀಡಬೇಕಿದೆ. ಶಿಕ್ಷಣದ ಜೊತೆಗೆ ದೊರೆಯುವ ಸಂಸ್ಕಾರವು ವಿದ್ಯಾರ್ಥಿಗಳ ಜೀವನವನ್ನು ಸುವರ್ಣಮಯವನ್ನಾಗಿ ಮಾಡಬಲ್ಲದು” ಎಂದು ರಾಮಾಯಣದ ನೈಜ ಉದಾಹರಣೆಗಳನ್ನು ಉದಾಹರಿಸುತ್ತಾ, ವಿವೇಕಾನಂದ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯ ಕಡೆಗೆ ವಿಶೇಷವಾದ ಗಮನವನ್ನು ಹರಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿಜ್ಞಾನ ವಿಭಾಗದ ತನುಶ್, ಕಲಾ ವಿಭಾಗದ ಪುರೋಹಿತ್ ಖುಷಿಬೆನ್ ಹಾಗೂ ವಾಣಿಜ್ಯ ವಿಭಾಗದ ವರ್ಷಾ ಪ್ರಕಾಶ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿ.ಇ.ಟಿ,ಜೆ.ಇ.ಇ, ನೀಟ್ ಪರೀಕ್ಷೆಗಳಲ್ಲಿ ಕಾಲೇಜಿಗೆ ಪ್ರಥಮ ಸ್ಥಾನಿಗಳಾದ ವಿಂಧ್ಯಾ ಕಾರಂತ್, ಗಮನ ಗೌರಿ ಎಸ್.ಎಂ, ಯುಕ್ತಾ ವಿ.ಜಿ ಇವರನ್ನು ಸನ್ಮಾನಿಸಲಾಯಿತು.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತಶ್ರೇಣಿಯಲ್ಲಿ ತೇರ್ಗಡೆ ಹೊಂದಿದವಿಜ್ಞಾನ ವಿಭಾಗದ 337ವಿದ್ಯಾರ್ಥಿಗಳು,ವಾಣಿಜ್ಯ ವಿಭಾಗದ131 ವಿದ್ಯಾರ್ಥಿಗಳು ಕಲಾ ವಿಭಾಗದ 25 ವಿದ್ಯಾರ್ಥಿಗಳು ಹಾಗೂ ಸಿ.ಇ.ಟಿ, ಜೆ.ಇ.ಇ, ನೀಟ್ ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ವಿಶೇಷ ಅಭ್ಯಾಗತರಾಗಿ ಆಗಮಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ| ಕೆ.ಎಂ ಕೃಷ್ಣ ಭಟ್ ಮಾತನಾಡಿ “ಸಾಧನೆ ಮತ್ತು ಅಭಿನಂದನೆ ಸಭ್ಯ ಸಮಾಜದ ಸಹಜ ಪ್ರಕ್ರಿಯೆ. ಪಠ್ಯದಿಂದ ದೊರೆತ ಅಂಕ ಹಾಗೂ ಪಠ್ಯೇತರ ವಿಚಾರಗಳಿಂದ ಅರಿತ ಅಂತಃಕರಣ ಎರಡೂ ಬೆರೆತಾಗ ಮಾತ್ರ ಒಬ್ಬ ವಿದ್ಯಾರ್ಥಿಯ ಕಲಿಕೆ ಪರಿಪೂರ್ಣತೆಯನ್ನು ಪಡೆದುಕೊಳ್ಳಲು ಸಾಧ್ಯ. ಸಾಧನೆಯ ಹಾದಿ ಸುಗಮವಾದುದಲ್ಲ. ಈ ಹಂತದಲ್ಲಿ ಬೇರೆ ಬೇರೆ ಅಡೆತಡೆಗಳು ಸರ್ವೇಸಾಮಾನ್ಯ. ವಚನಗಾರ್ತಿ ಅಕ್ಕ ಮಹಾದೇವಿಯಂತೆ ಸಾಗಬೇಕಾದ ದಾರಿಯ ಸ್ಪಷ್ಟತೆ ಇದ್ದಾಗ ಮತ್ತು ಧ್ಯೇಯದ ಬದುಕಿಗೆ ಬದ್ಧತೆ ಜೊತೆಗೂಡಿದಾಗ ಮಾತ್ರ ಕನಸು ಕೈಗೂಡುತ್ತದೆ. ಹೆತ್ತವರಿಗೆ ಗುರು ಹಿರಿಯರಿಗೆ ಹೆಮ್ಮೆ ತರಿಸಬಲ್ಲ ಪ್ರೇರಣಾದಾಯಿ ಬದುಕು ವಿದ್ಯಾರ್ಥಿಗಳದ್ದಾಗಲಿ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಮುರಳೀಧರ ಭಟ್.ಬಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ವತ್ಸಲಾರಾಜ್ಞಿ ಹಾಗೂ ಡಾ| ಕೆ.ಎನ್. ಸುಬ್ರಹ್ಮಣ್ಯ ಉಪಸ್ಥಿತರಿದ್ದು, ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ, ಉಪಪ್ರಾಂಶುಪಾಲರಾದ ದೇವಿಚರಣ್ ರೈ ಎಂ, ಉಪನ್ಯಾಸಕ, ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಉಪನ್ಯಾಸಕಿ ಕವಿತಾ ವಂದಿಸಿದರು. ಉಪನ್ಯಾಸಕಿ ದೀಕ್ಷಿತಾ ಬಿ ಕಾರ್ಯಕ್ರಮವನ್ನು ನಿರೂಪಿಸಿದರು.
ಸಂಸದರಿಗೆ ಸನ್ಮಾನ |
ನೂತನ ಲೋಕಸಭಾ ಸಂಸದರಾಗಿ ಆಯ್ಕೆಯಾಗಿ ಮೊತ್ತ ಮೊದಲ ಬಾರಿಗೆ ವಿವೇಕಾನಂದ ವಿದ್ಯಾಸಂಸ್ಥೆಗೆ ಆಗಮಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟ ಇವರನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ| ಕೆ.ಎಂ ಕೃಷ್ಣ ಭಟ್ ಇವರು ಅಯೋಧ್ಯಾ ರಾಮಮಂದಿರದ ಮಾದರಿಯ ಸ್ಮರಣಿಕೆಯನ್ನು ನೀಡುವುದರ ಮೂಲಕ ಸಂಸ್ಥೆಯ ವತಿಯಿಂದ ಸನ್ಮಾನಿಸಿದರು.