ಮೂಡುಬಿದಿರೆ: ಕೃಷಿ ಭೂಮಿ, ಮಠ, ಮಂದಿರ, ರುದ್ರಭೂಮಿಯ ಆಸ್ತಿಗಳನ್ನು ವಕ್ಫ್ ಕಾಯ್ದೆ ಹೆಸರಿನಲ್ಲಿ ಕಬಳಿಸುತ್ತಿರುವುದರ ವಿರುದ್ಧ ಹಾಗೂ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಮೂಡುಬಿದಿರೆ ತಾಲೂಕು ಸಂಘಟನೆಯಿಂದ ಶುಕ್ರವಾರ ರೈತರಿಂದ ಪ್ರತಿಭಟನೆ ನಡೆಯಿತು.
ಸಂಘಟನೆಯ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಮಾತನಾಡಿ, ಮೂಡುಬಿದಿರೆ ತಾಲೂಕಿನ ಪಡುಕೊಣಾಜೆ ಹಾಗೂ ಮೂಡುಕೊಣಾಜೆ ಗ್ರಾಮದ ರೈತರ ಕೆಲವು ಜಮೀನುಗಳನ್ನು ವಕ್ಫ್ ಆಸ್ತಿ ಎಂದು ಅಧಿಸೂಚನೆ ಹೊರಡಿಸಿರುವುದು ರೈತವಿರೋಧಿ ಹಾಗೂ ಕಾನೂನುಬಾಹಿರ. ರೈತರ ಮೇಲೆ ದಬ್ಬಾಳಿಕೆ ಮುಂದುವರಿದಲ್ಲಿ, ತೀವ್ರ ತರಹದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ, ವಕೀಲ, ಪ್ರಗತಿಪರ ಕೃಷಿಕ ಎಂ.ಎಸ್ ಕೋಟ್ಯಾನ್, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭಂಡಾರಿ, ಉಪಾಧ್ಯಕ್ಷರಾದ ವಲೇರಿಯನ್ ಕುಟಿನ್ಹ, ಗುಣಪಾಲ್ ಮುದ್ಯ, ಅಳಿಯೂರು ಘಟಕದ ಅಧ್ಯಕ್ಷ ಪ್ರವೀಣ್ ಭಟ್, ರಾಧಕೃಷ್ಣ ಶೆಟ್ಟಿ ಮಾರ್ಪಾಡಿ, ಪ್ರಾಂತ ಸದಸ್ಯ ಸುಬ್ರಾಯ ರೈ ಪುತ್ತೂರು, ಪಾಲಡ್ಕ ಗ್ರಾ.ಪಂ ಸದಸ್ಯ ಜಗದೀಶ್ ಕೋಟ್ಯಾನ್, ಪ್ರಗತಿಪರ ಕೃಷಿಕರಾದ ಸುಧಾಕರ್ ಅಂಚನ್, ಅಶ್ವಥ್ ಪಣಪಿಲ, ಜಗದೀಶ್ ಕೋಟ್ಯಾನ್ ಕಲ್ಲೊಟ್ಟು, ರೈತ ಮುಖಂಡರು, ರೈತರು ಉಪಸ್ಥಿತರಿದ್ದರು.
ಸರ್ಕಾರಿ ಆಸ್ಪತ್ರೆಯ ಮುಂಭಾಗದಿಂದ ತಹಸೀಲ್ದಾರ್ ಕಚೇರಿಯವರೆಗೆ ಪ್ರತಿಭಟನಾ ಜಾಥ ಮಾಡಲಾಯಿತು.
ಪ್ರಭಾರ ತಹಸೀಲ್ದಾರ್ ಪಿ.ಶ್ರವಣ್ ಕುಮಾರ್ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ವರದಿ: ಜಗದೀಶ್ ಪೂಜಾರಿ ಕಡಂದಲೆ