ಶ್ರೀರಂಗಪಟ್ಟಣ: ತಳ್ಳುಗಾಡಿಯಿಂದ ಐಸ್ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮರಣೋತ್ತರ ಪರೀಕ್ಷೆ ಬಳಿಕ ಸತ್ಯ ಬಯಲಾಗಿದ್ದು, ತಾಯಿಯೇ ಮಕ್ಕಳಿಗೆ ವಿಷವುಣಿಸಿ ಸಾಯಿಸಿದ್ದಾಳೆ. ಅಲ್ಲದೆ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ವರದಿಗಳು ತಿಳಿಸಿವೆ. ಶ್ರೀರಂಗಪಟ್ಟಣದ ಪೂಜಾ ಹಾಗೂ ಪ್ರಸನ್ನ ದಂಪತಿಯ ಕೌಟುಂಬಿಕ ಕಲಹದಿಂದ ಈ ಕೃತ್ಯ ಎಸಗಲಾಗಿದೆ. ಮಹಿಳೆಯು ತನ್ನ ಮೂರು ಮಕ್ಕಳಿಗೆ ವಿಷ ನೀಡಿ, ತಾನೂ ವಿಷ ಸೇವಿಸಿದ್ದಳು. ಅದರಲ್ಲಿ ಒಂದೂವರೆ ವರ್ಷದ ಅವಳಿ ಜವಳಿ ಕಂದಮ್ಮಗಳು ಸಾವನ್ನಪ್ಪಿವೆ.
ಪೂಜಾ ಹಾಗೂ ಆಕೆಯ ಪತಿ ಪ್ರಸನ್ನ ನಡುವೆ ಪದೇಪದೇ ಜಗಳವಾಗುತ್ತಿತ್ತು. ಬುಧವಾರ ನಡೆದ ಜಗಳದಿಂದ ಬೇಸತ್ತು ಪೂಜಾ ಮಕ್ಕಳಿಗೆ ಜಿರಳೆಯ ಔಷಧಿ ಹಾಕಿ, ತಾನೂ ತಿಂದಿದ್ದಳು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಅವಳಿ ಮಕ್ಕಳಾದ ತ್ರಿಶಾ, ತ್ರಿಶೂಲ್ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದರು. ಇನ್ನೊಬ್ಬ ಮಗಳು ಬೃಂದಾ ಹಾಗೂ ತಾಯಿ ಪೂಜಾಗೆ ಚಿಕಿತ್ಸೆ ಮುಂದುವರಿದಿದೆ. ಈ ನಡುವೆ ಮಕ್ಕಳು ಐಸ್ ಕ್ರೀಂ ತಿಂದು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಹರಡಿತ್ತು. ಆದರೆ ಈಗ ಮರಣೋತ್ತರ ಪರೀಕ್ಷೆಯಿಂದ ವಿಷಯ ಸ್ಪಷ್ಟವಾಗಿದೆ.