ಅಪಾರ ಕನಸುಗಳನ್ನು ಹೊತ್ತು ಹೆತ್ತವರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಆದರೆ ಶಾಲೆಯಲ್ಲಿ ಅವರು ಹಾದಿತಪ್ಪಿದರೆ ಹೆತ್ತವರಿಗಾಗುವಷ್ಟು ನೋವು ಬೇರಾರಿಗೂ ಆಗದು. ಇಲ್ಲೊಂದು ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರು ಸಹಪಾಠಿಯ ಹುಟ್ಟುಹಬ್ಬದ ಸಲುವಾಗಿ ಶಾಲಾ ಕೊಠಡಿಯಲ್ಲಿಯೇ ಭರ್ಜರಿ ಬಿಯರ್ ಪಾರ್ಟಿ ಮಾಡಿರುವುದು ಸುದ್ದಿಯಾಗಿದೆ. ವಿದ್ಯಾರ್ಥಿನಿಯರು ನಡೆಸಿರುವ ಬಿಯರ್ ಪಾರ್ಟಿಯ ಫೋಟೊಗಳು ಸಖತ್ ವೈರಲ್ ಆಗುತ್ತಿದ್ದು, ಇದೆಂಥಾ ಅವಸ್ಥೆಯಪ್ಪಾ ಎಂದು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ಮಸ್ತೂರಿ ಪ್ರದೇಶದ ಭಚೌರಾ ಗ್ರಾಮದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿಯರು ಸಹಪಾಠಿಯ ಹುಟ್ಟುಹಬ್ಬದ ಸಲುವಾಗಿ ಶಾಲಾ ಕೊಠಡಿಯಲ್ಲಿಯೇ ಬಿಯರ್ ಪಾರ್ಟಿ ಮಾಡಿದ್ದಾರೆ. ಮೂಲಗಳ ಪ್ರಕಾರ, ಕೆಲ ವಿದ್ಯಾರ್ಥಿನಿಯರು ಜುಲೈ 29ರಂದು ತರಗತಿಯ ಒಳಗೆ ಸಹಪಾಠಿಯ ಹುಟ್ಟುಹಬ್ಬವನ್ನು ಆಚರಿಸಿ ಬಿಯರ್ ಸೇವಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪಾರ್ಟಿಯ ವಿಡಿಯೋವನ್ನು ವಿದ್ಯಾರ್ಥಿನಿಯೊಬ್ಬಳು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಲಾಸ್‌ಪುರದ ಜಿಲ್ಲಾ ಶಿಕ್ಷಣಾಧಿಕಾರಿ ಟಿ.ಆರ್. ಸಾಹು ಮೂವರು ಸದಸ್ಯರ ಸಮಿತಿಯನ್ನು ರಚಿಸಿ ತನಿಖೆಯನ್ನು ಆರಂಭಿಸಿದ್ದಾರೆ. ಸಂಬಂಧಪಟ್ಟ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹೇಳಿಕೆಗಳನ್ನು ದಾಖಲಿಸಲಾಗಿದ್ದು, ಮೋಜಿಗಾಗಿ ಬಿಯರ್ ಬಾಟಲಿಗಳನ್ನು ಹಿಡಿದು ವಿಡಿಯೋ ಮಾಡಿದ್ದು, ಆದ್ರೆ ನಾವು ಬಿಯರ್ ಸೇವಿಸಿಲ್ಲ ಎಂದು ವಿದ್ಯಾರ್ಥಿನಿಯರು ತನಿಖಾ ತಂಡಕ್ಕೆ ತಿಳಿಸಿದ್ದಾರೆ ಎಂದು ಸಾಹು ಹೇಳಿದ್ದಾರೆ.
ಈ ಕುರಿತ ಪೋಸ್ಟ್ ಒಂದನ್ನು ಸೂರ್ಯ ಪ್ರಕಾಶ್ ಸೂರ್ಯಕಾಂತ್ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಚಿತ್ರದಲ್ಲಿ ಒಂದಷ್ಟು ವಿದ್ಯಾರ್ಥಿನಿಯರು ಶಾಲಾ ಕೊಠಡಿಯೊಳಗೆ ಬಿಯರ್ ಸೇವಿಸಿ ಬರ್ತ್‌ಡೇ ಪಾರ್ಟಿ ಮಾಡಿರುವ ದೃಶ್ಯವನ್ನು ಕಾಣಬಹುದು.