ನವದೆಹಲಿ: ನಾಮಪತ್ರ ಸಲ್ಲಿಸಲು ಇನ್ನೇನು ಕೆಲವೇ ನಿಮಿಷಗಳಿರುವಾಗ ಬಿಜೆಪಿ ಅಭ್ಯರ್ಥಿಯೊಬ್ಬರು ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಘಟನೆ ನಡೆದಿದೆ. ಗುರುವಾರ ನಾಮಪತ್ರ ಸಲ್ಲಿಸುವುದಕ್ಕೆ ಕೊನೆಯ ದಿನವಾಗಿತ್ತು. ಉತ್ತರ ಪ್ರದೇಶದ ದೇವರಿಯಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೊನೆ ಕ್ಷಣದಲ್ಲಿ ಕೆಲವೇ ನಿಮಿಷಗಳು ಬಾಕಿಯಿರುವಾಗ ಓಡೋದಿ ಬಂದು ನಾಮಪತ್ರ ಸಲ್ಲಿಸಲು ಹರಸಾಹಸಪಟ್ಟರು.
ದೇವರಿಯಾದ ಬಿಜೆಪಿ ಅಭ್ಯರ್ಥಿ ಶಶಾಂಕ್ ಮಣಿ ತ್ರಿಪಾಠಿ ಮೇ 9ರಂದು ನಾಮಪತ್ರ ಸಲ್ಲಿಸುವವರಿದ್ದರು. ಈ ವೇಳೆ ಮೈಲ್ ಗ್ರೌಂಡ್ ಪಕ್ಕದ ಮದುವೆ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಿತ್ತು. ಮುಖ್ಯ ಅತಿಥಿಗಳಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಆಗಮಿಸಿದ್ದರು.
ಸಭೆ ಮುಗಿಸಿ ಮೆರವಣಿಗೆಯಲ್ಲಿ ಬರುವಷ್ಟರಲ್ಲಿ ಕಲೆಕ್ಟರ್ ಕಚೇರಿ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಅಷ್ಟೊತ್ತಿಗಾಗಲೇ ಸಮಯ 2:45 ಆಗಿತ್ತು. ನಾಮಪತ್ರ ಸಲ್ಲಿಸಲು 3 ಗಂಟೆ ವರೆಗೆ ಮಾತ್ರ ಅವಕಾಶವಿತ್ತು. ಹೀಗಾಗಿ ಬಿಜೆಪಿ ಜಿಲ್ಲಾಧ್ಯಕ್ಷ, ಪ್ರಸ್ತಾವಿತರು, ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಓಡಲಾರಂಭಿಸಿದರು. ಕೊನೆಗೂ ಸಮಯಕ್ಕೆ ತಲುಪುವಲ್ಲಿ ಯಶಸ್ವಿಯಾದರು.