‘ವಾಜಪೇಯಿ ಜನ್ಮ ಶತಾಬ್ದಿ’ ಆಚರಣೆ, ‘ಮನ್ ಕೀ ಬಾತ್’ ವೀಕ್ಷಣೆ, ‘ಕಾಂಗ್ರೆಸ್ ವಿರುದ್ಧ ಪ್ರತಿಭಟನೆ’ಗೆ ಕಿಶೋರ್ ಕುಮಾರ್ ಕುಂದಾಪುರ ಕರೆ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಆಚರಣೆಯ ಪ್ರಯುಕ್ತ ‘ಅಟಲ್ ವಿರಾಸತ್’ ಕಾರ್ಯಕ್ರಮವನ್ನು ಎಲ್ಲಾ ಮಂಡಲಗಳಲ್ಲಿ ವಿಚಾರ ಸಂಕಿರಣ ಹಾಗೂ ಇತರ ಮಾದರಿ ಕಾರ್ಯಕ್ರಮಗಳೊಂದಿಗೆ ಆಚರಿಸುವ ಜೊತೆಗೆ ಮಾ.30ರಂದು ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದ ನೇರ ಪ್ರಸಾರವನ್ನು ಜಿಲ್ಲೆಯ ಎಲ್ಲಾ 6 ಮಂಡಲಗಳ ವ್ಯಾಪ್ತಿಯ 1,112 ಬೂತ್ ಗಳಲ್ಲಿ ವೀಕ್ಷಿಸಿ, ವರದಿ ಮತ್ತು ಫೋಟೋಗಳನ್ನು ಸರಲ್ ಆಪ್ ನಲ್ಲಿ ಅಪ್ಲೋಡ್ ಮಾಡುವ ಮೂಲಕ ಉಡುಪಿ ಜಿಲ್ಲೆ ರಾಜ್ಯದಲ್ಲೇ ಮುಂಚೂಣಿ ಸ್ಥಾನವನ್ನು ಪಡೆಯುವಂತೆ ಎಲ್ಲರೂ ಸಂಘಟಿತ ಶ್ರಮ ವಹಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಕರೆ ನೀಡಿದರು.
ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇತ್ತೀಚೆಗೆ ಮಲ್ಪೆಯಲ್ಲಿ ನಡೆದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಮೀನುಗಾರ ಮಹಿಳೆಯರ ಪರ ಮಾತನಾಡಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಬಿಜೆಪಿ ಮುಖಂಡ ಮಂಜುನಾಥ್ ಸಾಲ್ಯಾನ್ ಕೊಳ ಅವರ ವಿರುದ್ಧ ಪೊಲೀಸ್ ಇಲಾಖೆ ಎಫ್ಐಆರ್ ದಾಖಲು ಮಾಡಿರುವುದು ಖಂಡನೀಯ. ಹನಿಟ್ರ್ಯಾಪ್ ಪ್ರಕರಣ ಹಾಗೂ ಧರ್ಮಾಧಾರಿತ ಮೀಸಲಾತಿಯನ್ನು ಸದನದಲ್ಲಿ ವಿರೋಧಿಸಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸಹಿತ 18 ಮಂದಿ ಬಿಜೆಪಿ ಶಾಸಕರನ್ನು ಅಧಿಕಾರ ದುರ್ಬಳಕೆ ಮಾಡಿ ಅಮಾನತುಗೊಳಿಸಿರುವ ಸ್ಪೀಕರ್ ನಡೆ ಅತ್ಯಂತ ಖಂಡನೀಯ ಎಂದು ಅವರು ತಿಳಿಸಿದರು.
ಮುಸ್ಲಿಂ ತುಷ್ಟೀಕರಣವನ್ನೇ ಮೂಲ ಧ್ಯೇಯವನ್ನಾಗಿಸಿಕೊಂಡಿರುವ ಕಾಂಗ್ರೆಸ್ ಮುಖವಾಡ ಕಳಚಿ ಬಿದ್ದಿದೆ. ಸಾರ್ವಜನಿಕ ಗುತ್ತಿಗೆಯಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ನೀಡಲು ಅಗತ್ಯ ಬಿದ್ದರೆ ಸಂವಿಧಾನ ಬದಲಾಗುತ್ತದೆ ಎಂಬಂತೆ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಉದ್ದಟತನ ವರ್ತನೆಯನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ ಅವರು, ಸಂವಿಧಾನ ವಿರೋಧಿ ಕಾಂಗ್ರೆಸ್ ವಿರುದ್ಧ ಎಲ್ಲಾ ಮಂಡಲ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದರು.
ಅಧ್ಯಕ್ಷರ ಸೂಚನೆ ಮೇರೆಗೆ ಉಡುಪಿ ನಗರಸಭಾ ಸದಸ್ಯ ಯೋಗೀಶ್ ಸಾಲ್ಯಾನ್ ಅವರು ಮಲ್ಪೆಯಲ್ಲಿ ನಡೆದ ಮೀನು ಕಳ್ಳತನ ಪ್ರಕರಣ ಹಾಗೂ ಮಲ್ಪೆ ಬಂದರಿನಲ್ಲಿ ನಡೆಯುವ ದೈನಂದಿನ ಪ್ರಚಲಿತ ವಿದ್ಯಮಾನಗಳ ಕುರಿತು ವಿಸ್ತ್ರತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ಕೆ.ರಾಘವೇಂದ್ರ ಕಿಣಿ, ರೇಷ್ಮಾ ಉದಯ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರುಗಳಾದ ಕಿರಣ್ ಕುಮಾರ್ ಬೈಲೂರು, ಮಹಾವೀರ ಹೆಗ್ಡೆ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಕೋಶಾಧಿಕಾರಿ ಮನೋಹರ್ ಎಸ್. ಕಲ್ಮಾಡಿ, ದ.ಕ. ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು, ನೇಕಾರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ರತ್ನಾಕರ ಇಂದ್ರಾಳಿ, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಹಾಗೂ ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಪ್ರಕೋಷ್ಠಗಳ ಸಂಚಾಲಕರು, ಉಡುಪಿ ನಗರಸಭಾ ಸದಸ್ಯರು ಉಪಸ್ಥಿತರಿದ್ದರು.