ಹೈದರಾಬಾದ್: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮತ್ತು ಅವರ ಸಹೋದರ ಅಕ್ಬರುದ್ದೀನ್ ಓವೈಸಿ ಅವರ ವಿರುದ್ಧ ಬಿಜೆಪಿ ನಾಯಕಿ ನವನೀತ್ ರಾಣಾ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಪೊಲೀಸರನ್ನು 15 ಸೆಕೆಂಡ್ ಹಿಂಪಡೆಯಿರಿ. ಅವರು ಎಲ್ಲಿಂದ ಬಂದಿದ್ದಾರೆ ಹಾಗೂ ಎಲ್ಲಿ ಹೋದರು ಎಂಬುದೇ ತಿಳಿಯದಂತೆ ಮಾಡುತ್ತೇವೆ ಎಂದು ನವನೀತ್ ರಾಣಾ ವಾಗ್ದಾಳಿ ನಡೆಸಿದ್ದಾರೆ. ತೆಲಂಗಾಣದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಯಾಚನೆ ಮಾಡಿದ ಅವರು ಈ ಮಾತುಗಳನ್ನಾಡಿದರು.
ಈ ಹಿಂದೆ ಓವೈಸಿ ಸಹೋದರರು ಮಾಡಿದ್ದ ಭಾಷಣಕ್ಕೆ ಪ್ರತಿಯಾಗಿ ಅವರು ಈ ಹೇಳಿಕೆ ನೀಡಿದ್ದಾರೆ. ಹಿಂದೂ ಮತ್ತು ಮುಸ್ಲಿಮರ ಜನಸಂಖ್ಯೆಯ ಅನುಪಾತ ಸರಿದೂಗಿಸಲು 15 ನಿಮಿಷ ಸಾಕು ಎಂದು ಕೆಲವು ವರ್ಷಗಳ ಹಿಂದೆ ಓವೈಸಿ ಸಹೋದರರು ಹೇಳಿಕೆ ನೀಡಿದ್ದರು.
ಮಹಾರಾಷ್ಟ್ರ ಅಮರಾವತಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ನವನೀತ್ ಮಾತನಾಡಿ, ನೀವು 15 ನಿಮಿಷ ಪೊಲೀಸರನ್ನು ಹಿಂದಕ್ಕೆ ಸರಿಸಲು ಕೇಳುತ್ತಿದ್ದೀರಿ. ಆದರೆ ಅದೇ ಕೆಲಸಕ್ಕೆ 15 ಸೆಕೆಂಡ್ ಸಾಕು ಎನ್ನುತ್ತಿದ್ದೇವೆ ಎಂದು ಅವರು ಹೇಳಿದರು.