ಬೆಂಗಳೂರು: ಲೋಕಸಭಾ ಚುನಾವಣೆಯ ರಾಜ್ಯದ ಮೊದಲ ಹಂತದ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ನಡುವೆ ಬಿಜೆಪಿ ಕಾಂಗ್ರೆಸ್ ವಿರುದ್ಧ ಮತ್ತೊಂದು ಅಸ್ತ್ರ ಎಸೆದಿದೆ. ಕಾಂಗ್ರೆಸ್ ಡೇಂಜರ್ ಎನ್ನುವ ಪೋಸ್ಟರ್ ಬಿಡುಗಡೆಗೊಳಿಸಿರುವ ಬಿಜೆಪಿ, ಓಲೈಕೆ ರಾಜಕಾರಣದ ವಿರುದ್ಧ ಹರಿಹಾಯ್ದಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಓಲೈಕೆ, ತುಷ್ಟೀಕರಣದ ರಾಜಕರಣ ಮುಂದುವರಿಸಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ ಅಶ್ವತ್ಥನಾರಾಯಣ್ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. ಓಲೈಕೆ ಜೊತೆಗೆ ಭಯೋತ್ಪಾದಕರ ಬಗ್ಗೆ ಮೃದು ಧೋರಣೆಯನ್ನೂ ಕಾಂಗ್ರೆಸ್ ಹೊಂದಿದೆ ಎಂದು ಅವರು ದೂರಿದರು.
ಕಾಂಗ್ರೆಸ್ ಡೇಂಜರ್ ಪೋಸ್ಟರ್ ಬಿಡುಗಡೆ ಮಾಡಿದ್ದೇವೆ. ಅದರಲ್ಲಿ ನೀಡಲಾಗಿರುವ ಕ್ಯು ಆರ್ ಕೋಡ್ ನಲ್ಲಿ ಘಟನಾವಳಿಗಳನ್ನು ನೋಡಬಹುದು ಎಂದು ಅವರು ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ರಾಜ್ಯ ವಕ್ತಾರರಾದ ಡಾ ನರೇಂದ್ರ ರಂಗಪ್ಪ, ಅಶೋಕ್ ಗೌಡ, ಎಸ್ ಹರೀಶ್ ಮುಂತಾದವರು ಉಪಸ್ಥಿತರಿದ್ದರು.