ಚೆನ್ನೈ: ಪಟಾಕಿ ತಯಾರಿಕಾ ಫ್ಯಾಕ್ಟರಿಯಲ್ಲಿ ಭಯಾನಕ ಸ್ಫೋಟ ಸಂಭವಿಸಿ ನಾಲ್ವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವಿರುದುನಗರದ ಸತ್ತೂರಿನಲ್ಲಿ ನಡೆದಿದೆ. ಖಾಸಗಿ ಒಡೆತನದ ಪಟಾಕಿ ತಯಾರಿಕಾ ಘಟಕದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ರಾಸಾಯನಿಕಗಳನ್ನು ಬೆರೆಸಿದ ಪರಿಣಾಮ ಸ್ಫೋಟಕ ಸಂಭವಿಸಿದೆ ಎನ್ನಲಾಗಿದೆ.
ನಾಲ್ವರು ಮೃತಪಟ್ಟಿದ್ದು, ಒಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ವಿರುದುನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಫೋಟದ ರಭಸಕ್ಕೆ ಕಾರ್ಖಾನೆಯ ಒಂದು ಭಾಗದ ಕಟ್ಟಡ ಸಂಪೂರ್ಣ ಕುಸಿದಿದೆ. ಅಕ್ಕಪಕ್ಕದ ಬಿಲ್ಡಿಂಗ್‌ಗಳು ಹಾನಿಗೊಳಗಾಗಿವೆ. ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ಬಗ್ಗೆ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಸಂತ್ರಸ್ತ ಕುಟುಂಬಗಳಿಗೆ ತಲಾ 3 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.