ಕುಂದಾಪುರ: ಮಲ್ಪೆ ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ದಾರಿತಪ್ಪಿ ಬೀಜಾಡಿ ಕಡಲತೀರಕ್ಕೆ ಬಂದು ಮರಳಿನಲ್ಲಿ ಸಿಲುಕಿದ ಘಟನೆ ನಡೆದಿದೆ. ಚುಕ್ಕಾಣಿ ಹಿಡಿಯುವವರ ನಿದ್ರಾಹೀನತೆಯಿಂದ ದೋಣಿ ದಾರಿ ತಪ್ಪಿದೆ ಎನ್ನಲಾಗಿದೆ.
ಏ.30ರ ಮಧ್ಯರಾತ್ರಿ ಮಲ್ಪೆ ಬಂದರಿನಿಂದ ದೋಣಿ ಹೊರಟಿತ್ತು. ಏಳು ಮೀನುಗಾರರು ದೋಣಿಯಲ್ಲಿದ್ದರು. ಆದರೆ ಅವರೆಲ್ಲಾ ನಿದ್ರೆಗೆ ಜಾರಿದ್ದು, ಮೇ 1ರಂದು ಬೆಳಗಿನ ಜಾವ 3 ಗಂಟೆ ವೇಳೆಗೆ ಗ್ಲೂ ಕ್ಲಿಚ್ ಕಾಟೇಜ್ ಬಳಿಯ ಬೀಜಾಡಿ ಸಮುದ್ರ ತೀರಕ್ಕೆ ದೋಣಿ ತಲುಪಿದೆ. ಭಾರೀ ಗಾಳಿಯಿಂದ ಕೂಡ ದಿಕ್ಕು ಬದಲಾಗಿರಬಹುದು ಎಂದು ಹೇಳಲಾಗಿದೆ.
ಬೆಳಗ್ಗಿನ ಹೊತ್ತಿಗೆ ಮರಳಿನಲ್ಲಿ ಸಿಲುಕಿದ್ದ ದೋಣಿಯನ್ನು ನೋಡಲು ಸ್ಥಳದಲ್ಲಿ ಸಾರ್ವಜನಿಕರು ನೆರೆದಿದ್ದರು. ಮೀನುಗಾರರು ಯಾರೂ ಇಲ್ಲದ ಕಾರಣ, ಿದು ಬೇಹುಗಾರಿಕಾ ದೋಣಿಯೇ ಎಂಬ ಶಂಕೆ ವ್ಯಕ್ತವಾಯಿತು. ಬಳಿಕ ಅದು ಕೋಡಿಬೆಂಗ್ರೆಯವರಿಗೆ ಸೇರಿದ್ದು ಎಂದು ತಿಳಿದುಬಂತು. ಈ ಅವಘಡದಿಂದ ಪಕ್ಕದ ರೆಸಾರ್ಟ್ ನಲ್ಲಿದ್ದ ಪ್ರವಾಸಿಗರು ದೋಣಿಯನ್ನು ಹತ್ತಿರದಿಂದ ನೋಡಿದರು. ಹಾನಿಗೊಂಡಿದ್ದ ದೋಣಿಯನ್ನು ದುರಸ್ತಿಗೊಳಿಸಿ ಬಳಿಕ ಎರಡು ಬೋಟ್ ಗಳು ಮತ್ತು ಜೆಸಿಬಿಗಳ ನೆರವಿನಿಂದ ಮತ್ತೆ ಆಳ ಸಮುದ್ರಕ್ಕೆ ಕೊಂಡೊಯ್ದು ಬುಧವಾರ ಮಲ್ಪೆ ಬಂದರಿಗೆ ಕೊಂಡೊಯ್ಯಲಾಯಿತು.