ನವದೆಹಲಿ: ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ದಿಲ್ಲಿ ಮತ್ತು ನೋಯ್ಡಾದ ಕನಿಷ್ಠ 8 ಶಾಲೆಗಳ ಮಕ್ಕಳನ್ನು ತಕ್ಷಣವೇ ಮನೆಗೆ ಕಳುಹಿಸಲಾದ ಘಟನೆ ನಡೆದಿದೆ. ಘಟನೆಯ ಹಿನ್ನೆಲೆಯಲ್ಲಿ ಒಂದು ಶಾಲೆಯಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನೂ ಸ್ಥಗಿತಗೊಳಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೋಧನೆ ನಡೆಸಿದ್ದಾರೆ.
ಮದರ್ ಮೇರಿ ಶಾಲೆಯಲ್ಲಿ ನಡೆಯುತ್ತಿದ್ದ ಪರೀಕ್ಷೆಗಳನ್ನು ಸ್ಥಗಿತಗೊಳಿಸಿ ತಕ್ಷಣ ಎಲ್ಲಾ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಲಾಯಿತು. ಹೆತ್ತವರು ಶಾಲೆಗಳಿಗೆ ಆಗಮಿಸಿ ಮಕ್ಕಳನ್ನು ಕರೆದೊಯ್ಯುತ್ತಿರುವುದು ಕಂಡುಬಂತು.
ಬಾಂಬ್ ಪತ್ತೆ ದಳ, ಬಾಂಬ್ ನಿಷ್ಕ್ರಿಯ ದಳ, ಅಗ್ನಿ ಶಾಮಕ ವಾಹನಗಳು ಶಾಲೆಗಳತ್ತ ಧಾವಿಸಿವೆ. ಇಮೇಲ್ ಮೂಲಕ ಬಾಂಬ್ ಬೆದರಿಕೆಯನ್ನು ರವಾನಿಸಲಾಗಿದೆ. ಇಮೇಲ್ ಎಲ್ಲಿಂದ ಬಂದಿದೆ, ಇಮೇಲ್ ನ ಐಪಿ ವಿಳಾಸ ಪತ್ತೆಹಚ್ಚುವ ಯತ್ನ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.