ರಾಯ್ ಪುರ: ಕೋಲ್ಕತ್ತಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಗುರುವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಹಿನ್ನೆಲೆ ವಿಮಾನ ರಾಯ್ ಪುರ್ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
187 ಪ್ರಯಾಣಿಕರು ಹಾಗೂ 6 ಸಿಬ್ಬಂದಿಯಿದ್ದ ಇಂಡಿಗೋ ವಿಮಾನ ನಾಗ್ಪುರದಿಂದ ಕೋಲ್ಕತ್ತಗೆ ಹೊರಟಿತ್ತು. ಬೆದರಿಕೆ ಸಂದೇಶ ಬಂದ ಕಾರಣ ವಿಮಾನದ ಮಾರ್ಗ ಬದಲಿಸಲಾಯಿತು’ ಎಂದು ರಾಯ್ ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ಹೇಳಿದ್ದಾರೆ.
‘ಬೆಳಿಗ್ಗೆ 9 ಗಂಟೆಗೆ ವಿಮಾನ ಲ್ಯಾಂಡ್ ಆಗಿದ್ದು, ತಕ್ಷಣವೇ ತಪಾಸಣೆಗಾಗಿ ಪ್ರತ್ಯೇಕ ರನ್–ವೇಗೆ ಸ್ಥಳಾಂತರಿಸಲಾಗಿದೆ. ತಾಂತ್ರಿಕ ಹಾಗೂ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.