Saturday, February 15, 2025
Homeರಾಜ್ಯಜೀತಪದ್ಧತಿ ಇನ್ನೂ ಜೀವಂತ | ಶುಂಠಿ ತೋಟಗಳಲ್ಲಿ ದುಡಿಯುತ್ತಿದ್ದ 30ಕ್ಕೂ ಹೆಚ್ಚು ಕಾರ್ಮಿಕರ ರಕ್ಷಣೆ

ಜೀತಪದ್ಧತಿ ಇನ್ನೂ ಜೀವಂತ | ಶುಂಠಿ ತೋಟಗಳಲ್ಲಿ ದುಡಿಯುತ್ತಿದ್ದ 30ಕ್ಕೂ ಹೆಚ್ಚು ಕಾರ್ಮಿಕರ ರಕ್ಷಣೆ

ತುಮಕೂರು: ಜೀತಪದ್ಧತಿ ತುಮಕೂರು ಜಿಲ್ಲೆಯಲ್ಲಿ ಇನ್ನೂ ಜೀವಂತವಿದ್ದು, ಶುಂಠಿ ಕೃಷಿ ತೋಟಗಳಲ್ಲಿ ಜೀತದಾಳುಗಳಂತೆ ದುಡಿಯುತ್ತಿದ್ದ 30ಕ್ಕೂ ಹೆಚು ಬಡ ಕೂಲಿ ಕಾರ್ಮಿಕರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮ, ಮಂಜುನಾಥಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳು ರೈತರಿಂದ ನೂರಾರು ಎಕರೆ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಬಾಡಿಗೆ ಪಡೆದು ಶುಂಠಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಶುಂಠಿ ಹೊಲದಲ್ಲಿ ಕೆಲಸ ಮಡಲು ಮೈಸೂರು, ಚಾಮರಾಜನಗರ, ಕೊಳ್ಳೇಗಾಲ, ಬಳ್ಳಾರಿ, ವಿಜಯಪುರ ಸೇರಿದಂತೆ ವಿವಿಧ ಭಾಗಗಳಿಂದ ಬಡಕೂಲಿ ಕಾರ್ಮಿಕರಿಗೆ ಹೆಚ್ಚಿನ ಕೂಲಿ ಆಸೆ ತೋರಿಸಿ ಕರೆತಂದು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ವರದಿಗಳಾಗಿವೆ.
ಕಾರ್ಮಿಕರಿಂದ ಅವರ ಆಧಾರ್‌ ಕಾರ್ಡ್‌, ಓಟರ್‌ ಐಡಿ, ಮೊಬೈಲ್‌ ಇನ್ನಿತರೆ ವಸ್ತುಗಳನ್ನು ಕಿತ್ತುಕೊಂಡು ಹೆದರಿಸಿ ಶುಂಠಿ ತೋಟದ ಶೆಡ್‌ನಲ್ಲಿರಿಸಿದ್ದರು ಎನ್ನಲಾಗಿದೆ. ಕಾರ್ಮಿಕರು ಹೊರಹೋಗದಂತೆ ಗೂಂಡಾಗಳನ್ನು ನೇಮಿಸಿ ದುಡಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ದಿನವಿಡೀ ಸತತ ಕೆಲಸ ಮಾಡಬೇಕು. ತಪ್ಪಿಸಿಕೊಳ್ಳಲು ಯತ್ನಿಸಿದರೆ, ಕೆಲಸ ಮಾಡದಿದ್ದರೆ ಕಾವಲುಗಾರರು ದೊಣ್ಣೆಗಳಿಂದ ಮೈ ಬರೆ ಬರುವಂತೆ ಹೊಡೆದು ದೌರ್ಜನ್ಯ ಮಾಡುತ್ತಾರೆ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ದುಡಿಸುತ್ತಿದ್ದು, 1 ರೂ. ಕೂಲಿಯನ್ನೂ ಕೊಟ್ಟಿಲ್ಲ. ಸಂಜೆಯಾದರೆ ಮದ್ಯ ನೀಡುತ್ತಾರೆ. ಕೂಲಿ ಕೇಳಿದರೆ ಹೊಡೆಯುತ್ತಾರೆ ಎಂದು ಕಾರ್ಮಿಕರು ಅಳುತ್ತಾ ಹೇಳಿದ್ದಾರೆ.
ಸ್ಥಳೀಯರ ನೆರವಿನಿಂದ ಹೊನ್ನವಳ್ಳಿ ಪೊಲೀಸರು ಬುಧವಾರ ರಾತ್ರಿ ಶುಂಠಿ ಕ್ಯಾಂಪ್‌ಗಳಲ್ಲಿದ್ದ 30 ಜನ ಕೂಲಿ ಕಾರ್ಮಿಕರನನು ರಕ್ಷಣೆ ಮಾಡಿದ್ದಾರೆ. ಕಾರ್ಮಿಕರನ್ನು ಸದ್ಯ ಹೊನ್ನವಳ್ಳಿ ಸಮುದಾಯ ಭವನದಲ್ಲಿರಿಸಲಾಗಿದೆ. ಸ್ಥಳಕ್ಕೆ ತಿಪಟೂರು ತಹಶೀಲ್ದಾರ್‌ ಮತ್ತು ಕಾರ್ಮಿಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ತನಿಖೆ ಮುಂದುವರಿದಿದೆ.

RELATED ARTICLES
- Advertisment -
Google search engine

Most Popular