ಹಾಸನ: ಮಕ್ಕಳು ಮೊಬೈಲ್ ತ್ಯಜಿಸಿ ಪುಸ್ತಕ ಹಿಡಿಯಬೇಕು ಎಂದು ಹಾಸನ ಆಕಾಶವಾಣಿಯ ಮುಖ್ಯಸ್ಥರಾದ ವಿಜಯ್ ಅಂಗಡಿ ತಿಳಿಸಿದರು. ಅವರು ಹಾಸನ ನಗರದ ಶ್ರೀ ಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ಪುರೋಹಿತ್ ಹೆಚ್ ಡಿ ಪ್ರದೀಪ್ ಶರ್ಮ ರಚಿಸಿರುವ ‘ಸಂಸ್ಕಾರ ಬಾಲಧರ್ಮ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಇಂದು ತಂತ್ರಜ್ಞಾನ ಮುಖ್ಯವಾಗಿದೆ. ಆದರೆ ಮಕ್ಕಳು ಜ್ಞಾನದಿಂದ ವಂಚಿತರಾಗಬಾರದು. ಚಿಕ್ಕ ವಯಸ್ಸಿನಲ್ಲಿ ಮೊಬೈಲ್ ಬಳಕೆ ಅಪಾಯಕಾರಿ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು ಅಧ್ಯಯನಶೀಲರಾಗಿ ಸಮಾಜದಲ್ಲಿ ಬಹು ಎತ್ತರಕ್ಕೆ ಬೆಳೆದು ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.
ಪುಸ್ತಕದ ಲೇಖಕರಾದ ಪ್ರದೀಪ್ ಶರ್ಮಾರವರು ಮಾತನಾಡಿ, ರಾಜನಾದವನು ಸ್ವಕ್ಷೇತ್ರದಲ್ಲಿ ಮಾತ್ರ ಗೌರವಕ್ಕೆ ಪಾತ್ರನಾದರೆ ವಿದ್ಯಾವಂತನು ಎಲ್ಲಾ ಜಾಗದಲ್ಲಿಯೂ ಗೌರವವನ್ನು ಪಡೆಯುತ್ತಾನೆ. ಹಾಗಾಗಿ ಮಕ್ಕಳು ವಿದ್ಯಾವಂತರಾಗಬೇಕು ಸಂಸ್ಕಾರಯುತ ಧಾರ್ಮಿಕ ಜ್ಞಾನವನ್ನು ಪಡೆದುಕೊಳ್ಳಬೇಕು. ಆಗ ಮಾತ್ರ ಸದ್ಗುಣವಂತರಾಗಲು ಸಾಧ್ಯ, ಇಂದಿನ ಆಧುನಿಕ ವಿದ್ಯೆಯ ಜೊತೆಗೆ ನಮ್ಮ ಸನಾತನ ಸಾಂಪ್ರದಾಯಿಕ ವಿದ್ಯೆಯನ್ನು ಕೂಡ ಕಲಿಯುವುದು ಬಹುಮುಖ್ಯ ನಾವು ಎಲ್ಲದಕ್ಕೂ ಮೊದಲು ಸಂಸ್ಕಾರಯುತರಾಗಿ ಬದುಕುವುದನ್ನು ಕಲಿಯಬೇಕು ಎಂದು ತಿಳಿಸಿದರು.
ನವರಾತ್ರಿಯ ಸರಸ್ವತಿ ಪೂಜೆಯ ಪ್ರಯುಕ್ತ ಬೆಳಗಿನ ಜಾವದಿಂದಲೇ ಕಾಳಿಕಾದೇವಿಗೆ ಪಂಚಾಮೃತ ಅಭಿಷೇಕ ಹಾಗೂ ಶಾರದಾ ದೇವಿಯ ಅಲಂಕಾರ ಮಾಡಲಾಗಿತ್ತು. ಮೇಧ ಸರಸ್ವತಿ ಹೋಮ, ಮಕ್ಕಳಿಂದ ಸಾಮೂಹಿಕವಾಗಿ ಶಾರದಾ ಪೂಜೆಯು ನೆರವೇರಿತು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಹೆಚ್.ಕೆ. ಆನಂದ್, ಎ. ಬ್ಯಾಟರಂಗಾಚಾರ್, ಹೆಚ್. ವಿ. ಹರೀಶ್, ಹೆಚ್. ಎಸ್. ಆನಂದ್, ಎಂ. ಟಿ. ಸುರೇಶ್, ಹೆಚ್. ಕೆ. ಸತೀಶ್, ಅನಿಲ ಪದ್ಮನಾಭ, ಜಿ. ಆರ್. ತಿಮ್ಮಚಾರ್, ಎಸ್. ಆರ್. ಪ್ರಭಾಕರ್ ಮತ್ತು ಕಲ್ಲೇಶಾಚಾರ್ ಮತ್ತಿತರರು ಹಾಜರಿದ್ದರು. ತಾಲೂಕು ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಟಿ. ಕೇಶವಪ್ರಸಾದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.