ಕಾಸರಗೋಡು : ಚಾಲಕನ ನಿಯಂತ್ರಣ ತಪ್ಪಿದ ಬೋರ್‌ವೆಲ್ ಲಾರಿಯೊಂದು ರಸ್ತೆ ಬದಿಯ ಮನೆಯ ಮೇಲೆ ಮಗುಚಿ ಬಿದ್ದ ಪರಿಣಾಮ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ವೆಸ್ಟ್ ಎಳೇರಿ ಗ್ರಾಮದ ವರಕ್ಕಾಡ್ ಜಂಕ್ಷನ್ ಬಳಿ ಶನಿವಾರ ಮುಂಜಾನೆ ನಡೆದಿದೆ.
ಮೃತರನ್ನು ಮಧ್ಯಪ್ರದೇಶದ ದೇವೇಂದ್ರನ್ ಹಾಗೂ ಛತ್ತೀಸ್‌ಗಢದ ಮನಾಸಿರ್ ಎಂದು ಗುರುತಿಸಲಾಗಿದೆ. ಇಬ್ಬರೂ ಬೋರ್‌ವೆಲ್ ಲಾರಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಬೋರ್‌ವೆಲ್ ಕೊರೆತ ಕೆಲಸ ಮುಗಿಸಿ ವಾಪಸ್ ತೆರಳುತ್ತಿದ್ದ ಲಾರಿ ವರಕ್ಕಾಡ್ ಜಂಕ್ಷನ್ ಬಳಿಯ ಕಡಿದಾದ ಇಳಿಜಾರು ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿದೆ. ಬಳಿಕ ರಸ್ತೆ ಬದಿಯಲ್ಲಿದ್ದ ಜೇಸನ್ ಎಂಬುವರಿಗೆ ಸೇರಿದ ಮನೆಯ ಮೇಲೆ ಲಾರಿ ಮಗುಚಿ ಬಿದ್ದಿದೆ.
ಅಪಘಾತದ ರಭಸಕ್ಕೆ ಲಾರಿಯಲ್ಲಿದ್ದ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.
ಲಾರಿ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಛಾವಣಿಯ ಒಂದು ಭಾಗ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಅಪಘಾತ ಸಂಭವಿಸಿದ ವೇಳೆ ಮನೆಯೊಳಗಿದ್ದ ಜೇಸನ್ ಹಾಗೂ ಕುಟುಂಬದ ಸದಸ್ಯರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಲಾರಿಯಲ್ಲಿದ್ದ ಭಾರೀ ತೂಕದ ಕ್ರೇನ್ ಭಾಗವು ಮನೆಯ ತಾರಸಿಯ ಬದಿಗೆ ಸಿಲುಕಿಕೊಂಡಿದ್ದರಿಂದ ಮತ್ತಷ್ಟು ದೊಡ್ಡ ಅನಾಹುತ ತಪ್ಪಿದೆ ಎನ್ನಲಾಗಿದೆ.
ಮಾಹಿತಿ ತಿಳಿದು ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಲಾರಿಯನ್ನು ತೆರವುಗೊಳಿಸಿದರು.

