ಮೂಡುಬಿದಿರೆ: ನೆರೆಮನೆಯ ದನಗಳು ತನ್ನ ತೋಟಕ್ಕೆ ಬಂದು ಹಾನಿಗೊಳಿಸಿವೆ ಎಂಬ ಆಕ್ರೋಶದಿಂದ ಕಟ್ಟಿಹಾಕಿದ್ದ ದನಗಳಿಗೆ ಕತ್ತಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಮೂಡುಬಿದಿರೆ ತಾಲೂಕಿನ ಸಂಪಿಗೆ ಗ್ರಾಮದ ಪುಲುಕುಳದಲ್ಲಿ ನಡೆದಿದೆ.
ಈ ಸಂಬಂಧ ಪುಲುಕುಳ ನಿವಾಸಿ ಆಲ್ವಿನ್ ಸಾಂತಿಸ್ ವಿರುದ್ಧ ಪ್ರಕರಣ ದಾಖಲಾಗಿದೆ.
ನೆರೆಮನೆಯ ನಿವಾಸಿ ನವೀನ್ ಸಾಂತಿಸ್ ಅವರು ಮೂಡುಬಿದಿರೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ತಮ್ಮ ದನಗಳು ಆರೋಪಿಯ ತೋಟಕ್ಕೆ ಹೋಗಿದ್ದ ವಿಚಾರಕ್ಕೆ ಕೋಪಗೊಂಡ ಆಲ್ವಿನ್ ಸಾಂತಿಸ್, ಮನೆಯ ಬಳಿ ಕಟ್ಟಿಹಾಕಿದ್ದ ಎರಡು ದನಗಳ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.
ಗಾಯಗೊಂಡ ಎರಡೂ ದನಗಳು ಗರ್ಭಿಣಿ ದನಗಳಾಗಿದ್ದು, ದನಗಳ ಹೊಟ್ಟೆಯ ಭಾಗಕ್ಕೆ ದಂಟೆಯಿಂದ ಹೊಡೆದ ಪರಿಣಾಮ ಗರ್ಭದಲ್ಲಿದ್ದ ಕರುಗಳಿಗೂ ಗಾಯಗಳಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಘಟನೆ ಕುರಿತು ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

