ಲಕ್ನೊ: ನಾಪತ್ತೆಯಾಗಿದ್ದ ಎಮ್ಮೆಯ ಮಾಲೀಕನನ್ನು ಪತ್ತೆ ಹಚ್ಚಲು ಉತ್ತರ ಪ್ರದೇಶ ಪೊಲೀಸರು ಮಾಡಿದ ವಿಭಿನ್ನ ಪ್ರಯೋಗ ಈಗ ಸುದ್ದಿಯಾಗಿದೆ. ಉತ್ತರ ಪ್ರದೇಶದ ಪ್ರತಾಪ್‌ಗಢದಲ್ಲಿ ಈ ಘಟನೆ ನಡೆದಿದೆ.
ಪ್ರತಾಪ್‌ಗಢದ ಮಹೇಶ್‌ಗಂಜ್‌ನಲ್ಲಿ ದಾರಿ ತಪ್ಪಿದ್ದ ನಂದಲಾಲ್ ಎಂಬವರ ಎಮ್ಮೆ ಪುರೆ ಹರಿಕೇಶ್ ಎಂಬ ಗ್ರಾಮಕ್ಕೆ ಹೋಗಿತ್ತು. ದಾರಿ ತಪ್ಪಿದ್ದ ಎಮ್ಮೆಯನ್ನು ಹನುಮಾನ್ ಸರೋಜ್ ಎಂಬಾತ ಹಿಡಿದು ಕಟ್ಟಿ ಹಾಕಿದ್ದ.
ಕಾಣೆಯಾದ ತನ್ನ ಎಮ್ಮೆಗಾಗಿ ನಂದಲಾಲ್ ಮೂರು ದಿನ ಹುಡುಕಾಡಿ ಸುಸ್ತಾಗಿದ್ದ. ಕೊನೆಗೆ ಸರೋಜ್ ಎಂಬವನಲ್ಲಿ ಎಮ್ಮೆ ಇರುವುದು ಆತನಿಗೆ ಗೊತ್ತಾಗುತ್ತದೆ. ಸರೋಜ್ ಬಳಿ ಕೇಳಿದಾಗ ಎಮ್ಮೆ ತನ್ನದು ಎಂದ ಆತ, ಎಮ್ಮೆ ಕೊಡಲು ನಿರಾಕರಿಸಿದ್ದಾನೆ. ಕೊನೆಗೆ ಪ್ರಕರಣ ಪಂಚಾಯತ್‌ಗೆ ತಲುಪಿತ್ತು. ಅಲ್ಲೂ ವಿಚಾರ ಕ್ಲಿಯರ್ ಆಗದ ಹಿನ್ನೆಲೆಯಲ್ಲಿ ಪ್ರಕರಣ ಠಾಣೆ ಮೆಟ್ಟಿಲೇರಿತ್ತು.
ಮಹೇಶ್‌ಗಂಜ್ ಪೊಲೀಸರು ಇಬ್ಬರನ್ನು ಕರೆಸಿ ಗಂಟೆಗಟ್ಟಲೆ ವಿಚಾರಣೆ ನಡೆಸಿದರೂ ಇಬ್ಬರೂ ಎಮ್ಮೆ ತಮ್ಮದೆಂದು ಹೇಳಿಕೊಂಡು ಪಟ್ಟು ಸಡಿಲಿಸಲಿಲ್ಲ. ಪ್ರಕರಣದಿಂದ ತಲೆಕೆಟ್ಟ ಪೊಲೀಸರು ಕೊನೆಗೆ ವಿವಾದ ಬಗೆ ಹರಿಸಲು ಉಪಾಯವೊಂದನ್ನು ಮಾಡಿದ್ದಾರೆ. ಆ ಪ್ರಕಾರ ಯಜಮಾನನ್ನು ಹುಡುಕುವ ಜವಾಬ್ದಾರಿ ಎಮ್ಮೆಗೇ ಬಿಟ್ಟಿದ್ದಾರೆ. ತಮ್ಮ ಗ್ರಾಮಗಳಿಗೆ ಹೋಗುವ ದಾರಿಯಲ್ಲಿ ನಂದಲಾಲ್ ಮತ್ತು ಹನುಮಾನ್ ಇಬ್ಬರನ್ನೂ ನಿಲ್ಲುವಂತೆ ಪೊಲೀಸರು ಸೂಚಿಸಿದ್ದಾರೆ. ಬಳಿಕ ಎಮ್ಮೆಯನ್ನು ಪೊಲೀಸರು ಬಿಟ್ಟಿದ್ದಾರೆ. ಕೊನೆಗೆ ಎಮ್ಮೆ ಮಾಲೀಕ ನಂದಲಾಲ್ ಕಡೆ ಮುಖಮಾಡಿ ಆತನೊಂದಿಗೆ ಮನೆಯತ್ತ ಹೊರಟಿದೆ. ಅಲ್ಲಿಗೆ ಪ್ರಕರಣ ಸುಖಾಂತ್ಯಗೊಂಡಿದೆ.