ಉನ್ನಾವ್: ಲಕ್ನೊ-ಆಗ್ರಾ ಎಕ್ಸ್‌ಪ್ರೆಸ್ ವೇಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ 18 ಮಂದಿ ಮೃತಪಟ್ಟು, 19 ಮಂದಿ ಗಾಯಗೊಂಡಿದ್ದಾರೆ. ಅತಿ ವೇಗವಾಗಿ ಚಲಿಸುತ್ತಿದ್ದ ಡಬಲ್ ಡೆಕ್ಕರ್ ಬಸ್ಸು ಮತ್ತು ಹಾಲಿನ ಟ್ಯಾಂಕರ್ ನಡುವೆ ಈ ಅಪಘಾತ ಸಂಭವಿಸಿದೆ.
ಬಸ್ಸು ಬಿಹಾರದ ಮೋತಿಹಾರಿಯಿಂದ ದೆಹಲಿಗೆ ತೆರಳುತ್ತಿದ್ದಾಗ ಗರ್ಹಾ ಗ್ರಾಮದ ಬಳಿ ಹಾಲಿನ ಟ್ಯಾಂಕರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ಸು ಸಂಪೂರ್ಣ ಜಖಂಗೊಂಡಿದೆ. ಜನರು ಬಸ್ಸಿನಿಂದ ಎಸೆಯಲ್ಪಟ್ಟಿದ್ದಾರೆ.
ಪೊಲೀಸರು ಹಾಗೂ ಇತರ ತುರ್ತು ಸಿಬ್ಬಂದಿ ಸಂತ್ರಸ್ತರನ್ನು ಹೊರತೆಗೆಯಲು ಹರಸಾಹಸಪಟ್ಟರು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸ್ಥಳದಲ್ಲಿ ನೆಲದ ಮೇಲೆ ಬಿದ್ದಿದ್ದ ದೇಹಗಳು ಛಿದ್ರವಾಗಿದ್ದವು. ಅಲ್ಲಲ್ಲಿ ಬಸ್ಸಿನ ಅವಶೇಷಗಳು ಎಸೆಯಲ್ಪಟ್ಟಿದ್ದವು. ಇಂತಹ ಭೀಕರ ಸನ್ನಿವೇಶಕ್ಕೆ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ ಸಾಕ್ಷಿಯಾದರು.
