ಹುಬ್ಬಳ್ಳಿ: ಬಸ್ಸು ಮೇಲ್ಛಾವಣಿ ಸೋರದಿದ್ದರೂ ಕೊಡೆ ಹಿಡಿದು ಬಸ್ಸು ಚಾಲನೆ ಮಾಡಿ ವಿಡಿಯೊ ಮಾಡಿದ ಕೆಎಸ್ಸಾರ್ಟಿಸಿ ಬಸ್ಸು ಚಾಲಕ ಹಾಗೂ ನಿರ್ವಾಹಕಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕೃತ್ಯ ಎಸಗಿರುವುದಕ್ಕೆ ಚಾಲಕ ಹನುಮಂತಪ್ಪ ಕಿಲ್ಲೇದಾರ, ನಿರ್ವಾಹಕಿ ಅನಿತಾ ಎಚ್. ಅಮಾನತುಗೊಂಡಿದ್ದಾರೆ. ಮೋಜಿಗಾಗಿ ಮಾಡಿದ ವಿಡಿಯೋ ಇದು ಎಂದು ಚಾಲಕ ಮತ್ತು ನಿರ್ವಾಹಕಿ ಹೇಳಿದ್ದರೂ, ಇಲಾಖೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಂಡಿದೆ.
ಮೇ 23ರಂದು ಬಸ್ಸಿನಲ್ಲಿ ಯಾವುದೇ ಪ್ರಯಾಣಿಕರಿಲ್ಲದ ವೇಳೆ ಈ ವಿಡಿಯೋ ಮಾಡಲಾಗಿತ್ತು ಎನ್ನಲಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಮನೋರಂಜನೆಗಾಗಿ ವಿಡಿಯೊ ಮಾಡಲಾಗಿದೆ. ಆದರೆ ವಿಡಿಯೊ ವೈರಲ್ ಆಗುತ್ತಿದ್ದಂತೆ ಧಾರವಾಡ ವಿಭಾಗೀಯ ನಿಯಂತ್ರಣಾಧಿಕಾರಿ ಬಸ್ಸಿನ ವಾಸ್ತವತೆ ಕುರಿತು ವರದಿ ನೀಡಲು ವಿಭಾಗೀಯ ತಾಂತ್ರಿಕ ಶಿಲ್ಪಿಗೆ ಸೂಚಿಸಿದ್ದಾರೆ.
ಅಧಿಕಾರಿಗಳು ತಪಾಸಣೆ ನಡೆಸಿದಾಗ ಚಾಲಕ ಕುಳಿತುಕೊಳ್ಳುವ ಸ್ಥಳವಾಗಲೀ, ಬಸ್ಸಿನ ಇತರ ಯಾವುದೇ ಸ್ಥಳವಾಗಲೀ ಮಳೆಯಿಂದ ಸೋರುತ್ತಿರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಸಮಸ್ಯೆ ತೋರಿಸುವುದಕ್ಕಿಂತ ಸಂಸ್ಥೆಯ ಮಾನ ಹರಾಜು ಮಾಡುವ ದುರುದ್ದೇಶ ಈ ವಿಡಿಯೊದಲ್ಲಿದ್ದುದರಿಂದ ಕರ್ತವ್ಯ ಲೋಪದ ಆಪಾದನೆಯಲ್ಲಿ ಇವರನ್ನು ಅಮಾನತುಗೊಳಿಸಲಾಗಿದೆ.