ಬೆಂಗಳೂರು: ಚಲಿಸುತ್ತಿರುವಾಗಲೇ ಬಿಎಂಟಿಸಿ ಚಾಲಕರೊಬ್ಬರಿಗೆ ಹೃದಯಾಘಾತವಾಗಿದ್ದು, ಟ್ರಾಫಿಕ್ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ ಹಾಗೂ 45 ಪ್ರಯಾಣಿಕರ ಪ್ರಾಣ ಉಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಶಾಂತಿನಗರದ ಜೋಡಿ ರಸ್ತೆ ಬಳಿ ಘಟನೆ ನಡೆದಿದೆ. KA51 AJ6905 ಬಸ್ ಚಾಲನೆ ಮಾಡುತ್ತಿದ್ದ ವೇಳೆ ಚಾಲಕ ವೀರೇಶ್‌ಗೆ ಏಕಾಏಕಿ ಹೃದಯಾಘಾತ ಸಂಭವಿಸಿದೆ. ನಡುರಸ್ತೆಯಲ್ಲೇ ಬಸ್ಸು ಸ್ಲೋ ಆಗಿದ್ದನ್ನ ಕಂಡು ಸಮೀಪದಲ್ಲಿದ್ದ ಟ್ರಾಫಿಕ್ ಪೊಲೀಸರು ಓಡೋಡಿ ಬಂದಿದ್ದಾರೆ.
ಹಲಸೂರು ಟ್ರಾಫಿಕ್ ಪೊಲೀಸ್ ಆರ್. ರಘು ಕುಮಾರ್ ಬಸ್ಸು ಬಳಿ ನೋಡಿದಾಗ, ಚಾಲಕ ಎದೆ ಬಿಗಿ ಹಿಡಿದುಕೊಂಡು ಒಂದು ಕಡೆಗೆ ವಾಲಿದ್ದನ್ನು ಕಂಡಿದ್ದಾರೆ. ತಕ್ಷಣ ಎಚ್ಚೆತ್ತ ಟ್ರಾಫಿಕ್ ಪೊಲೀಸರು ಬಸ್ಸು ಹತ್ತಿ ಹ್ಯಾಂಡ್ ಬ್ರೇಕ್ ಹಾಕಿ, ಬಸ್ಸು ನಿಲ್ಲಿಸಿದ್ದಾರೆ. ಚಾಲಕನನ್ನು ಕೂಡಲೇ ಕೆಳಗಿಳಿಸಿದ್ದಾರೆ. ನಂತರ ಅಂಬುಲೆನ್ಸ್‌ಗೂ ಕಾಯದೇ ಅಶೋಕ ನಗರ ಟ್ರಾಫಿಕ್ ಸಿಬ್ಬಂದಿ ಪ್ರಸನ್ನ ಕುಮಾರ್ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರಾಫಿಕ್ ಪೊಲೀಸರ ಸಮಯಪ್ರಜ್ಞೆಯಿಂದ ಬಸ್ಸಿನಲ್ಲಿದ್ದ 45 ಪ್ರಯಾಣಿಕರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರಾಫಿಕ್ ಪೊಲೀಸರ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.