ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಪಲ್ಟಿ ಹೊಡೆದ ಘಟನೆ ನಗರದ ಹೊರವಲಯ ವಿದ್ಯಾನಗರದಲ್ಲಿ ನಡೆದಿದೆ. ಕಣ್ಣೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಬಸ್ಸು ಮುಂದಿನಿಂದ ಸಾಗುತ್ತಿದ್ದ ಇನ್ನೊಂದು ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಮಗುಚಿ ಬಿದ್ದಿದೆ. ಬಸ್ಸಿನಲ್ಲಿ ಕಡಿಮೆ ಪ್ರಯಾಣಿಕರಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಅಪಾಯ ತಪ್ಪಿದೆ. ನೀಲೇಶ್ವರದ ರೇಶ್ಮಾ, ಪವಿತ್ರ, ಕಲ್ಯೊಟ್ ನ ಕಮಲಾಕ್ಷ, ಪ್ರಭಾಕರ ಎಂ, ಪೆರಿಯದ ಗೋಕುಲ್ ರಾಜ್, ಸರಿನಾ, ಮೇಘ, ಕೃಷ್ಣ ಎಂಬವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸು ಪಲ್ಟಿಯಾದುದರಿಂದ ಕೆಲವು ಹೊತ್ತು ಟ್ರಾಫಿಕ್ ಜಾಮ್ ಆಗಿದೆ. ಖಾಸಗಿ ಬಸ್ಸುಗಳ ಅತಿವೇಗಕ್ಕೆ ಕಡಿವಾಣ ಹಾಕುವಂತೆ ಆಗ್ರಹ ಕೇಳಿಬರುತ್ತಿದೆ. ಪ್ರಕರಣ ದಾಖಲಾಗಿದೆ.