ಶಾಸಕ ಗುರುರಾಜ್ ಗಂಟಿಹೊಳೆ ಅವರು ಮಾತಾಡಿ ಬೈಂದೂರು ಕ್ಷೇತ್ರದ ವಿದ್ಯಾವಂತರಿಗೆ ಉದ್ಯೋಗ ನೀಡುವ ಗುರಿಯೊಂದಿಗೆ ಕೇಂದ್ರ ಸರಕಾರದ ಎನ್ಎಸ್ಡಿಸಿಐ ಯೋಜನೆಯಡಿಯಲ್ಲಿ ದೇಶದ ಎರಡನೇಯ ಅತೀ ದೊಡ್ಡ ಬೃಹತ್ ಉದ್ಯೋಗ ಮೇವನ್ನು ರಾಜ್ಯದಲ್ಲಿ ಪ್ರಥಮ ಬಾರಿಗೆ ಆಗಸ್ಟ್ 31ರಂದು ಬೈಂದೂರಿನ ಯಡ್ತರೆ ಜೆ.ಎನ್.ಆರ್. ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಅವರು ಗುರುವಾರ ಮಧ್ಯಾಹ್ನ ಉಪ್ಪುಂದದ ‘ಕಾರ್ಯಕರ್ತ’ ಶಾಸಕರ ಕಚೇರಿಯಲ್ಲಿ ಕರೆಯಲಾದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದರು. ಉದ್ಯೋಗ ಮೇಳದಲ್ಲಿ ಭಾಗವಹಿಸಲು ಸುಮಾರು 7ಸಾವಿರ ಜನರು ನೋಂದಣಿ ಮಾಡಿಕೊಂಡಿದ್ದು 10ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಅಂತರಾಷ್ಟ್ರೀಯ ಉದ್ಯೋಗ ಮೇಳದಲ್ಲಿ ಜಪಾನ್, ಮಲೇಶಿಯಾ, ಜರ್ಮನಿ, ಕ್ರೊವೇಶಿಯ, ಗಲ್ಪ್ ದೇಶಗಳ ಕಂಪನಿಗಳು ಭಾಗವಹಿಸಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿ, ವಸತಿ ವ್ಯವಸ್ಥೆ, ಊಟ ಉಪಹಾರ, ಮೀಸಾ ಹಾಗೂ ಉಚಿತ ವಿಮಾನ ಟಿಕೆಟ್ ಕೇಂದ್ರ ಸರಕಾರದಿಂದ ದೊರಯಲಿದೆ ಎಂದು ಅವರು ಹೇಳಿದರು.
ಬೈಂದೂರು ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ ಉಪ್ಪುಂದ ಮಾತನಾಡಿ, ಶಾಸಕರ ನೇತೃತ್ವದಲ್ಲಿ ವಿದ್ಯೆ, ಉದ್ಯೋಗ, ಆರೋಗ್ಯದ ದೃಷ್ಟಿ ಇಟ್ಟುಕೊಂಡು ಸಮೃದ್ಧ ಬೈಂದೂರು ಯೋಜನೆ ರೂಪಿಸಲಾಗಿದೆ. ಸರಕಾರಿ ಶಾಲೆಗಳ ಅಭಿವೃದ್ಧಿ ಗೆ 3೦೦ ಟ್ರೀಸ್ ಮೂಲಕ ಕಾರ್ಯಗತಗೊಳಿಸಲಾಗಿದ್ದು, ಬೈಂದೂರಿನಲ್ಲಿ ಡಯಾಲಿಸಸ್ ಕೇಂದ್ರ ಸ್ಥಾಪನೆ, ಉಪ್ಪುಂದದಲ್ಲಿ ನಮ್ಮ ಕ್ಲಿನಿಕ್ ಪ್ರಾರಂಭವಾಗಲಿದೆ. ಉದ್ಯೋಗ ನೀಡುವ ನಿಟ್ಟಿನಲ್ಲಿ ಕೇಂದ್ರದಿಂದ ಈ ಮೇಳ ನಡೆಯಲಿದ್ದು ಎಲ್ಲ ರೀತಿಯ ವ್ಯವಸ್ಥೆ ಒದಗಿಸಲು ಸಿದ್ಧತೆ ನಡೆಸಲಾಗಿದೆ ಎಂದರು.
ಈ ಸಂದರ್ಭ ಉದ್ಯಮಿ ವೆಂಕಟೇಶ ಕಿಣಿ ಬೈಂದೂರು, ಅಜಿನೋರಾ ಸಂಸ್ಥೆಯ ಸಹಾಯಕ ನಿರ್ದೇಶಕ ಡೈರೆಕ್ಟರ್ ಅಗಸ್ಟಿನ್ ಮೊದಲಾದವರು ಉಪಸ್ಥಿತರಿದ್ದರು. ಶೋಧನ್ ಮಲ್ಪೆ ಸ್ವಾಗತಿಸಿದರು. ಶ್ರೀ ಗಣೇಶ ಉಪ್ಪುಂದ ವಂದಿಸಿದರು.