ಬೆಂಗಳೂರು: ನಾನು ಯಾವುದೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (MUDA) ದಾಖಲಾತಿ ತೆಗೆದುಕೊಂಡು ಬಂದಿಲ್ಲ. ನನ್ನ ಮೇಲೆ ಆರೋಪ ಮಾಡುತ್ತಿರುವ ಕುಮಾರಸ್ವಾಮಿ, ಛಲವಾದಿ ನಾರಾಯಣಸ್ವಾಮಿ ಚಾಮುಂಡೇಶ್ವರಿ ಅಥವಾ ಧರ್ಮಸ್ಥಳಕ್ಕಾಗಲಿ ಬರಲಿ, ಅಲ್ಲಿ ಪ್ರಮಾಣ ಮಾಡುತ್ತೇನೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸವಾಲು ಹಾಕಿದ್ದಾರೆ.
ಮುಡಾ ಕಚೇರಿ ಮೇಲೆ ಇಡಿ ದಾಳಿ ಸಂಬಂಧ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಅವರು, ನಾನು ಮುಡಾದ ಯಾವುದೇ ಫೈಲ್ ತಂದಿದ್ದರೆ ಶಿಕ್ಷೆಯಾಗಲಿ. ಕುಮಾರಸ್ವಾಮಿ ಮನೆಯಲ್ಲಿ ಫೈಲ್ ಇರಬಹುದು. ಛಲವಾದಿ ನಾರಾಯಣಸ್ವಾಮಿ ಫೈಲ್ ಕದ್ದಿರಬಹುದು. ನಾನು ಅಂತಹ ಕೆಲಸ ಮಾಡಿಲ್ಲ ಎಂದು ತಿರುಗೇಟು ನೀಡಿದರು.
ಚಾಮುಂಡೇಶ್ವರಿಗೋ, ಮಂಜುನಾಥ ದೇವಸ್ಥಾನಕ್ಕೋ ಅವರು ಬರಲಿ. ನಾನೂ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡುತ್ತೇನೆ. ಇಡಿಯವರು ದಾಖಲೆಗಳನ್ನು ಕೇಳಿದ್ದಾರೆ. ಎಷ್ಟು ದಾಖಲೆಗಳನ್ನು ಕೇಳುತ್ತಾರೋ ಅಷ್ಟೂ ದಾಖಲೆಗಳನ್ನು ಕೊಡುತ್ತೇವೆ ಎಂದರು.
ಒಂದೇ ಒಂದು ಸಣ್ಣ ಪೇಪರ್ ನಾನು ತಂದಿದ್ದರೆ, ದೇವರು ಕೊಡಬಾರದ ಶಿಕ್ಷೆ ಕೊಡಲಿ. ಸುಳ್ಳು ಹೇಳಿ ಹೇಳಿ ಹಾಳಾಗಿ ಹೋಗುತ್ತಾರೆ. ನಾನೂ ನಿಮ್ಮಂತೆ ದೇಶದ ಪ್ರಜೆ. ಇಡಿ ನನಗೆ ನೋಟಿಸ್ ನೀಡಿದರೆ ನಾನೂ ಉತ್ತರ ಕೊಡುತ್ತೇನೆ ಎಂದು ಹೇಳಿದರು.