Wednesday, September 11, 2024
Homeಆರೋಗ್ಯಸಿ.ಪಿ.ಆರ್. ಅಥವಾ ಹೃದಯ ಪುನಶ್ಚೇತನ ಪ್ರಕ್ರಿಯೆ: ಏನಿದು ಹೃದಯ ಸ್ತಂಭನ (Cardiac arrest)?

ಸಿ.ಪಿ.ಆರ್. ಅಥವಾ ಹೃದಯ ಪುನಶ್ಚೇತನ ಪ್ರಕ್ರಿಯೆ: ಏನಿದು ಹೃದಯ ಸ್ತಂಭನ (Cardiac arrest)?

ಹೃದಯ ತನ್ನ ಬಡಿತವನ್ನು ನಿಲ್ಲಿಸುವುದನ್ನು ಹೃದಯ ಸ್ತಂಭನ ಎನ್ನುತ್ತಾರೆ. ಹೃದಯಾಘಾತ ಅದರ ಮುಖ್ಯ ಕಾರಣಗಳಲ್ಲಿ ಒಂದು. ಹೃದಯ ಸ್ತಂಭನ ಎನ್ನುವುದು ಒಂದು ತುರ್ತು ಪರಿಸ್ಥಿತಿಯಾಗಿದ್ದು, ತಕ್ಷಣವೇ ಹೃದಯದ ಬಡಿತ ಆರಂಭವಾಗುವಂತೆ ನೋಡಿಕೊಳ್ಳಬೇಕು. ತುರ್ತು ಹೃದಯ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಹೃದಯ ಸ್ತಂಭನದ ಚಿಹ್ನೆಗಳನ್ನು ಗುರುತಿಸಬೇಕು.

ಏನಿದು ಚಿಹ್ನೆಗಳು ?

  1. ರೋಗಿ ದಿಡೀರನೆ ಜ್ಞಾನ ಅಥವಾ ಪ್ರಜ್ಞೆ ತಪ್ಪುವುದು, ಕುಸಿದು ಬೀಳುವುದು
  2. ಉಸಿರಾಟ ನಿಂತಿರುತ್ತದೆ
  3. ದೇಹವು ನೀಲಿ ಬಣ್ಣಕ್ಕೆ ತಿರುಗುತ್ತದೆ. ರಕ್ತದ ಚಲನೆ ಸಂಪೂರ್ಣ ನಿಂತು ಹೋಗಿ, ಮೆದುಳಿಗೆ ಆಮ್ಲಜನಕದ ಪೂರೈಕೆ ನಿಂತು, ವ್ಯಕ್ತಿ ಮೂರ್ಛೆ ತಪ್ಪಿ ಬೀಳುತ್ತಾರೆ.
  4. ನಾಡಿ ಬಡಿತ ಇಲ್ಲದಿರುವುದು
  5. ಕಣ್ಣಿನ ಪಾಪೆಗಳು ಅಗಲವಾಗಿರುವುದು ಮತ್ತು ಬೆಳಕು ಚೆಲ್ಲಿದಾಗ ಪಾಪೆಗಳು ಚಿಕ್ಕದಾಗದಿರುವುದು.
    ಹೃದಯಾಘಾತದಿಂದ ಹೃದಯ ಸ್ತಂಭನ ಆದಾಗ ಹೃದಯವು ರಕ್ತವನ್ನು ಹೃದಯದಿಂದ ಹೊರತಳ್ಳಲು ಸಾಧ್ಯವಾಗುವುದಿಲ್ಲ ದೇಹದ ಅತಿ ಮುಖ್ಯ ಅಂಗಗಳಾದ ಮೆದುಳು/ಕಿಡ್ನಿ ಮುಂತಾದ ಅಂಗಗಳು ಜೀವಕೋಶಗಳು 3 ರಿಂದ 4 ನಿಮಿಷಕ್ಕಿಂತ ಜಾಸ್ತಿ ಆಮ್ಲಜನಕ ಇಲ್ಲದೆ ಜೀವಿಸಲಾರದು ತಕ್ಷಣವೇ ಗುರುತಿಸಿ ಹೃದಯ ತನ್ನ ಚಲನೆಯನ್ನು ಆರಂಭಿಸುವಂತೆ ಮಾಡಬೇಕು. ಕಾರ್ಡಿಯೋಪಲ್ಮನರಿ ರೆಸಸಿಟೇಷನ್ ಎಂಬ ಪ್ರಕ್ರಿಯೆ ಮುಖಾಂತರ ಸ್ತಂಭನಗೊಂಡ ಹೃದಯ, ಮಗದೊಮ್ಮೆ ಕೆಲಸ ಮಾಡುವಂತೆ ಪ್ರಚೋದಿಸಲಾಗುತ್ತದೆ. ಎದೆಯ ಭಾಗದಲ್ಲಿ ಹೃದಯ ನೀವುವಿಕೆ ಮತ್ತು ಬಾಯಿಯಿಂದ ಉಸಿರು ತುಂಬುವಿಕೆ ಮಾಡಿ ಹೃದಯ ಪುನಃ ತನ್ನ ಕೆಲಸ ಆರಂಭಿಸುವಂತೆ ಪ್ರಚೋದಿಸಲಾಗುತ್ತದೆ. ಹೃದಯ ಸ್ತಂಭನವಾದ 3 ರಿಂದ 5 ನಿಮಿಷದ ಒಳಗೆ ಈ ಪ್ರಕ್ರಿಯೆ ಮಾಡತಕ್ಕದ್ದು. ಇದಕ್ಕೆ ಸ್ಪಂಧಿಸದೇ ಇದ್ದಾಗ ಇಲೆಕ್ಟ್ರಿಕ್ ಶಾಕ್ ಅಥವಾ ಡಿಫಿಬ್ರಿಲೇಷನ್ ಎಂಬ ಪ್ರಕ್ರಿಯೆ ಮೂಲಕ ಹೃದಯ ಪುನಃ ಕೆಲಸ ಮಾಡುವಂತೆ ಮಾಡುತ್ತಾರೆ.

ಹೃದಯ ಸ್ಥಂಭನ ಮತ್ತು ಹೃದಯಾಘಾತಕ್ಕೆ ಇರುವ ವ್ಯತ್ಯಾಸಗಳು:

  1. ಹೃದಯ ಸ್ತಂಭನ ಎನ್ನುವುದು ಹೃದಯದ ವಿದ್ಯುತ್ ಸಂಚಲನಕ್ಕೆ ಸಂಬಂಧಿಸಿದ ಸಮಸ್ಯೆಯಾಗಿರುತ್ತದೆ. ಹೃದಯಾಘಾತ ಎನ್ನುವುದು ಹೃದಯದ ರಕ್ತ ಸಂಚಲನಕ್ಕೆ ಸಂಬಂಧಿಸಿದ ಸಮಸ್ಯೆಯಾಗಿರುತ್ತದೆ.
    ಹೃದಯ ಸ್ತಂಭನ ಎನ್ನುವುದು ಹೃದಯದ ಕಾರ್ಯಕ್ಷಮತೆಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ಹೃದಯದಲ್ಲಿ ನಿರಂತರವಾಗಿ ವಿದ್ಯುತ್ ತರಂಗಗಳು ಸೃಷ್ಠಿಯಾಗಿ, ಹೃದಯ ನಿರಂತರವಾಗಿ ಚಲನೆಯಾಗುತ್ತಿರುವಂತೆ ಮಾಡುತ್ತದೆ. ಯಾವಾಗ ಈ ವಿದ್ಯುತ್ ತರಂಗಗಳ ಉತ್ಪಾದನೆ ಹಾಗೂ ಚಲನೆಯಲ್ಲಿ ವ್ಯತ್ಯಾಸವಾಗುತ್ತದೆ ಆವಾಗ, ಹೃದಯ ಅನಿಯಂತ್ರಿತವಾಗಿ ಬಡಿಯುತ್ತದೆ. ಇದನ್ನೇ ಅರಿಥ್‍ಮಿಯಾ ಅಥವಾ ಅನಿಯಂತ್ರಿತ (ಅಸ್ವಾಭಾವಿಕ) ಹೃದಯ ಬಡಿತ ಎನ್ನಲಾಗುತ್ತದೆ. ಇದರಿಂದ ಹೃದಯದಿಂದ ರಕ್ತ ಹೊರಹೋಗಲು ಸಾಧ್ಯವಾಗುವುದಿಲ್ಲ. ಆ ಮೂಲಕ ಮೆದುಳು, ಶ್ವಾಸಕೋಶ ಮತ್ತು ಇತರ ಅಂಗಾಂಗಗಳಿಗೆ ರಕ್ತ ಪೂರೈಕೆ ವ್ಯತ್ಯಯವಾಗಿಸುತ್ತದೆ. ಹೀಗೆ ಹೃದಯ ಅನಿಯಂತ್ರಿತವಾಗಿ ಬಡಿಯುವಾಗ ರಕ್ತ ಪೂರೈಕೆಯಲ್ಲಿ ವ್ಯತ್ಯಯವಾಗಿ, ಆ ವ್ಯಕ್ತಿ ಉಸಿರಾಟಕ್ಕಾಗಿ ಒದ್ದಾಡುತ್ತಿರುತ್ತಾನೆ. ತಕ್ಷಣವೇ ಚಿಕಿತ್ಸೆ ದೊರೆಯದಿದ್ದಲ್ಲಿ ಆ ವ್ಯಕ್ತಿ ಸಾವಿಗೀಡಾಗುವ ಎಲ್ಲಾ ಸಾಧ್ಯತೆ ಇರುತ್ತದೆ. ಈ ಹೃದಯ ಸ್ಥಂಭನವನ್ನು ತಕ್ಷಣವೇ ಗುರುತಿಸಿ, ಕೃತಕ ಉಸಿರಾಟ ಮತ್ತು ಹೃದಯ ಒತ್ತುವಿಕೆ(ಸಿಪಿಆರ್) ಮಾಡಿದ್ದಲ್ಲಿ, ಹೃದಯ ಪುನ: ಸ್ಪಂದಿಸುವಂತೆ ಮಾಡಲು ಸಾಧ್ಯವಿದೆ. ಆದರೆ ಒಂದೆರಡು ನಿಮಿಷಗಳಲ್ಲಿ ಕಾರ್ಯ ಪ್ರವೃತ್ತರಾಗಬೇಕು ಮತ್ತು ತಕ್ಷಣವೇ ಎಮರ್ಜೆಸ್ಸಿ ರೂಮ್‍ಗೆ ಸಂಪರ್ಕಿಸಿ AED ಅಥವಾ ಆಟೋಮ್ಯಾಟೆಡ್ ಎಕ್ಸ್‍ಟರ್‍ನಲ್ ಡಿಪೈಬ್ರಿಲೇಟರ್ ಎಂಬ ಯಂತ್ರದ ಸಹಾಯದಿಂದ ಕರೆಂಟ್ ಪ್ರವಹಿಸುವಂತೆ ಮಾಡಿ ನಿಂತ ಹೃದಯ ಚಲಿಸುವಂತೆ ಮಾಡಲಾಗುತ್ತದೆ.
  2. ಹೃದಯಾಘಾತ ಎನ್ನುವುದು ಹೃದಯದ ರಕ್ತ ಸಂಚಲನದಲ್ಲಿ ತಡೆ ಉಂಟಾಗುವ ಕಾರಣದಿಂದ ಆಗುವ ಸಮಸ್ಯೆ ಆಗಿರುತ್ತದೆ. ಹೃದಯದ ರಕ್ತ ಪೂರೈಕೆಯಾಗುವ ರಕ್ತನಾಳ ಒಡೆದಾಗ ಅಥವಾ ಮುಚ್ಚಿಕೊಂಡಾಗ, ಆ ಭಾಗದ ಹೃದಯ ನಿಷ್ಕ್ರಿಯವಾಗಿ ಕ್ರಮೇಣ ಸತ್ತು ಹೋಗುತ್ತದೆ. ಆದರೆ ಹೃದಯದ ಇತರ ಭಾಗಗಳು ಕೆಲಸ ಮಾಡುತ್ತಿರುತ್ತದೆ. ಇದನ್ನು ಗುರುತಿಸಿ, ರಕ್ತನಾಳವನ್ನು ಸರಿಪಡಿಸಿದಲ್ಲಿ ಹೃದಯ ಮೊದಲಿನಂತಾಗುತ್ತದೆ. ಹೃದಯಾಘಾತ ಉಂಟಾದಾಗ ವಿಪರೀತ ಎದೆನೋವು, ಬೆವರುವಿಕೆ, ಎಡಕೈಯಲ್ಲಿ ನೋವು, ಉಸಿರಾಟದಲ್ಲಿ ತೊಂದರೆ, ವಾಂತಿ, ವಾಕರಿಕೆ ಉಂಟಾಗಬಹುದು. ಸಾಮಾನ್ಯವಾಗಿ ಈ ಲಕ್ಷಣಗಳು ನಿಧಾನವಾಗಿ ಗೋಚರಿಸಿ ಗಂಟೆಗಳ ಕಾಲ, ದಿನಗಳ ಕಾಲ ಅಥವಾ ವಾರಗಳ ಕಾಲ ಕಾಡುತ್ತದೆ. ಆದರೆ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ. ಹೃದಯ ಸ್ತಂಭನವಾದಾಗ ಮಾತ್ರ ಹೃದಯ ಕೆಲಸ ನಿಲ್ಲಿಸುತ್ತದೆ. ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ, ಹೃದಯಾಘಾತ, ಹೃದಯ ಸ್ತಂಭನದಲ್ಲಿ ಪರ್ಯಾಯಾವಸಾನವಾಗುತ್ತದೆ. ನೆನಪಿರಲಿ ಎಲ್ಲಾ ಹೃದಯಾಘಾತಗಳು ಹೃದಯ ಸ್ತಂಭನದಲ್ಲಿ ಮುಕ್ತಾಯವಾಗುವುದಿಲ್ಲ. ಆದರೆ ಎಲ್ಲಾ ಹೃದಯ ಸ್ತಂಭನಗಳಿಗೂ ಹೃದಯಾಘಾತವೇ ಮುಖ್ಯ ಕಾರಣವಾಗಿರುತ್ತದೆ. ಈ ಕಾರಣದಿಂದ ಎದೆನೋವು, ಬೆವರುವಿಕೆ ಮತ್ತು ಉಸಿರಾmದ ಸಮಸ್ಯೆ ಆದ ತಕ್ಷಣವೇ ವೈದ್ಯರನ್ನು ಕಾಣತಕ್ಕದ್ದು.
    ಏನಿದು ಸಿಪಿಆರ್?
    ಹೃದಯ ಸ್ತಂಭನಕ್ಕೆ ಒಳಗಾದ ಹೃದಯವನ್ನು ಪುನಶ್ಚೇತನಗೊಳಿಸಿ, ಹೃದಯ ಬಡಿತವನ್ನು ತಕ್ಷಣವೇ ಪುನರಾರಂಭಿಸುವ ಪ್ರಕ್ರಿಯೆಗೆ‘ಸಿಪಿಆರ್ ಎನ್ನುತ್ತಾರೆ. ಕಾರ್ಡಿಯೋ ಪಲ್ಮನರಿ ರೀಸಸಿಟೇಷನ್ ಎಂದು ಆಂಗ್ಲಭಾಷೆಯಲ್ಲಿ ಮತ್ತು ಹೃದಯ ಪುನಶ್ಚೇತನ ಎಂದು ಕನ್ನಡೆದಲ್ಲಿ ಸಂಭೋದಿಸುತ್ತಾರೆ.
    ಇತ್ತೀಚಿನ ದಿನಗಳಲ್ಲಿ ಹೃದಯ ಸ್ತಂಭನ ಮತ್ತು ಹೃದಯಾಘಾತದ ಬಗ್ಗೆ ಹೆಚ್ಚು ಹೆಚ್ಚು ಚರ್ಚೆಗಳು ವೃತ್ತಪತ್ರಿಕೆಯಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಕೇಳಿ ಬರುತ್ತಿದೆ. ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ಮರಣದ ಕಾರಣದಿಂದಾಗಿ ಈ ಹೃದಯಾಘಾತ ಮತ್ತು ಹೃದಯ ಸ್ತಂಭನ ವಿಚಾರ ಹೆಚ್ಚು ಮುನ್ನಲೆಗೆ ಬಂದಿದೆ. ಹೃದಯ ಸ್ತಂಭನ ಹಲವಾರು ಕಾರಣಗಳಿಂದ ಆಗಬಹುದು. ಹೃದಯ ಸಂಬಂಧಿ ಖಾಯಿಲೆಗಳು, ತೀವ್ರವಾದ ಹೃದಯಾಘಾತ, ನೀರಿನಲ್ಲಿ ಮುಳುಗಿದಾಗ, ಗಂಟಲಿನಲ್ಲಿ ಆಹಾರ ಸಿಕ್ಕಿಕೊಳ್ಳುವುದು ಮತ್ತು ವಾಯುನಾಳ ಮುಚ್ಚಿಹೋಗುವುದು, ತಲೆಗೆ ತೀಕ್ಷ್ಣವಾದ ಏಟು ಬಿದ್ದಾಗ, ಅಪಘಾತದಿಂದ ತೀವ್ರ ರಕ್ತಸ್ರಾವವಾದಾಗ, ಅಸಹನೀಯವಾದ ನೋವು ಉಂಟಾದಾಗ, ಅನಿರೀಕ್ಷಿತವಾದ ಕೆಟ್ಟ ವಾರ್ತೆ ಕೇಳಿದಾಗ ಹೀಗೆ ಹತ್ತು ಹಲವು ಕಾರಣಗಳಿಂದ ಹೃದಯಸ್ತಂಭನ ಆಗಬಹುದು. ತಕ್ಷಣವೇ ಗುರುತಿಸಿ ಸಿಪಿಆರ್ ಮಾಡಿದಲ್ಲಿ ವ್ಯಕ್ತಿಯ ಜೀವವನ್ನು ಉಳಿಸಬಹುದು. ಇದೊಂದು ಸರಳ ಪ್ರಾಣರಕ್ಷಣಾ ವಿಧಾನವಾಗಿದ್ದು, ವೈದ್ಯರೇ ಮಾಡಬೇಕೆಂದಿಲ್ಲ. ಸಾಮಾನ್ಯ ಜನರೂ ಇದನ್ನು ಕಲಿತು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಿದೆ. ಸಣ್ಣ ಮಟ್ಟಿನ ತರಬೇತಿ ಸಾಕಾಗುತ್ತದೆ. ಶಾಲಾ ಕಾಲೇಜುಗಳಲ್ಲಿ, ಆಫೀಸುಗಳಲ್ಲಿ ಪ್ರಾತ್ಯಕ್ಷಿಕೆ ಮುಖಾಂತರ ಈ ಸಿಪಿಆರ್ ಹೇಳಿಕೊಡಲಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಸಿಪಿಆರ್ ಜೀವರಕ್ಷಕ ಪ್ರಕ್ರಿಯೆ ಆಗಿರುತ್ತದೆ. ತುರ್ತು ಸಂದರ್ಭಗಳಲ್ಲಿ ಸಿಪಿಆರ್ ನೀಡಿದಲ್ಲಿ ಇನ್ನೊಬ್ಬರ ಜೀವ ಉಳಿಸಿದ ಸಾರ್ಥಕತೆ ನಿಮಗೆ ಸಿಗಬಹುದು.
    ಹೇಗೆ ಮಾಡಲಾಗುತ್ತದೆ
    ಹೃದಯ ಸ್ತಂಭನ ಆದ ವ್ಯಕ್ತಿಯ ಎದೆಯ ಭಾಗದಲ್ಲಿ ನಮ್ಮ ಎರಡೂ ಹಸ್ತಗಳ ಮೂಲಕ ಎದೆಯ ಹಂದರದಲ್ಲಿ ಪುಪ್ಪುಸದ ನಡುವೆ ಇರುವ ಹೃದಯವನ್ನು ನಿಯಮಿತವಾಗಿ ಒತುತ್ತಾ, ರಕ್ತವು ದೇಹದಾದ್ಯಂತ ಚಲಿಸುವಂತೆ ನೋಡಿಕೊಳ್ಳುವ ಒಂದು ಸರಳ ವಿಧಾನವೇ ಸಿಪಿಆರ್. ಈ ಪ್ರಕ್ರಿಯೆ ಮಾಡುವಾಗ ಎರಡು ವ್ಯಕ್ತಿ ಇದ್ದಲ್ಲಿ ಉತ್ತಮ. ಅನಿವಾರ್ಯವಾದಲ್ಲಿ ಒಬ್ಬರೇ ಮಾಡಬಹುದು. ಎದೆಯನ್ನು ಒತ್ತುವ ನಡುವೆ ಬಾಯಿಯ ಮೂಲಕ ಉಸಿರನ್ನು ವ್ಯಕ್ತಿಯ ಶ್ವಾಸಕೋಶಕ್ಕೆ ತಲುಪಿಸುವ ಪ್ರಯತ್ನ ಮಾಡಬೇಕಾಗುತ್ತದೆ.

ಸಿಪಿಆರ್‍ನಲ್ಲಿ ಎರಡು ಪ್ರಕ್ರಿಯೆ ಇರುತ್ತದೆ.

1) ಎದೆ ಒತ್ತುವಿಕೆ : ಹೃದಯ ಸ್ತಂಭನಕ್ಕೆ ಒಳಗಾದ ವ್ಯಕ್ತಿಯನ್ನು ಅಂಗಾತ ಮಲಗಿಸಿ ಆತನ ಪಕ್ಕದಲ್ಲಿ ಕುಳಿತು ನಮ್ಮ ಎರಡು ಹಸ್ತಗಳನ್ನು (ಒಂದರ ಮೇಲೆ ಇನ್ನೊಂದು ಇಟ್ಟುಕೊಂಡು) ಎದೆಯ ಮಧ್ಯಭಾಗದಲ್ಲಿ ಇಟ್ಟುಕೊಂಡು ಒತ್ತಬೇಕು. ಎದೆಭಾಗ ಸುಮಾರು 1.5 ರಿಂದ 2 ಇಂಚುಗಳಷ್ಟು ಒಳಗೆ ಹೋಗಿ ಹೊರಗೆ ಬರುವಷ್ಟು ಪ್ರಮಾಣದಲ್ಲಿ ಒತ್ತಬೇಕು. ಕಡಿಮೆ ಒತ್ತಿದಲ್ಲಿ ಹೃದಯದಿಂದ ರಕ್ತ ಹೊರಹೋಗದಿರಲೂಬಹುದು. ಜಾಸ್ತಿ ಒತ್ತಿದರೆ ಎದೆಯ ಪಕ್ಕೆಲುಬು ಮುರಿಯಬಹುದು.ಈ ರೀತಿಯ ನಿಮಿಷಕ್ಕೆ 100 ರಿಂದ 120 ಬಾರಿ ವೇಗವಾಗಿ ಪರಿಣಾಮಕಾರಿಯಾಗಿ ಒತ್ತಬೇಕು. ಪ್ರತಿ ಮೂವತ್ತು ಬಾರಿ ಒತ್ತಿದ ಬಳಿಕ ಬಾಯಿಯ ಮುಖಾಂತರ ಎರಡು ಬಾರಿ ಉಸಿರನ್ನು ಜೋರಾಗಿ ನೀಡಬೇಕು. ಈ ರೀತಿ ಒತ್ತುವುದರಿಂದ ಹೃದಯದಿಂದ ರಕ್ತ ಹೊರಹೋಗಿ ಮೆದುಳಿಗೆ ಸರಬರಾಜಾಗುತ್ತದೆ ಹಾಗೂ ಇತರ ಭಾಗದಿಂದ ರಕ್ತ ಪುನ: ಸೇರಿಕೊಳ್ಳುತ್ತದೆ. ಅತಿಯಾದ ವೇಗದಿಂದ ಅಥವಾ ಅತೀ ನಿಧಾನದಿಂದ ಮಾಡಿದರೆ ಪ್ರಯೋಜನವಾಗಲಾರದು.

2) ಉಸಿರು ನೀಡುವಿಕೆ: ಪ್ರತಿ ಮೂವತ್ತು ಬಾರಿ ಎದೆ ಒತ್ತಿದ ಬಳಿಕ ವ್ಯಕ್ತಿಯ ತಲೆಯನ್ನು ನೇರವಾಗಿ ಇಟ್ಟು, ಒಂದು ಕೈಯಿಂದ ರೋಗಿಯ ಮೂಗನ್ನು ಮುಚ್ಚಿಕೊಂಡು ಇನ್ನೊಂದು ಕೈಯನ್ನು ವ್ಯಕ್ತಿಯ ಗದ್ದದ ಮೇಲೆ ಇಟ್ಟುಕೊಂಡು ಬಾಯಿಯನ್ನು ಅಗಲವಾಗಿ ತೆರೆದು ನಮ್ಮ ಬಾಯಿಯಿಂದ ವ್ಯಕ್ತಿಯ ಬಾಯಿಯನ್ನು ಪೂರ್ಣವಾಗಿ ಮುಚ್ಚಿ ನಮ್ಮ ಉಸಿರನ್ನು ನೀಡಬೇಕು. ಎರಡು ಬಾರಿ ದೀರ್ಘ ಉಸಿರನ್ನು ನೀಡಬೇಕು. ಹೀಗೆ ಮಾಡಿದಾಗ ನಮ್ಮ ಉಸಿರಿನಲ್ಲಿರುವ ಆಮ್ಲಜನಕ, ಆ ವ್ಯಕ್ತಿಯ ಶ್ವಾಸಕೋಶಗಳಿಗೆ ತಲುಪಿ, ರಕ್ತಕ್ಕೆ ಸೇರಿಕೊಂಡು ಅಲ್ಲಿಂದ ರಕ್ತನಾಳಗಳ ಮುಖಾಂತರ ಹೃದಯಕ್ಕೆ ಮತ್ತು ನಂತರ ದೇಹದ ಇತರ ಭಾಗಗಳಿಗೆ ತಲುಪುತ್ತದೆ. ಈ ಸಿಪಿಆರ್ ಪ್ರಕ್ರಿಯೆಯನ್ನು ರೋಗಿ ಆಸ್ಪತ್ರೆ ತಲುಪುವವರೆಗೆ ಮಾಡತಕ್ಕದ್ದು. ಯಾವುದೇ ಕಾರಣಕ್ಕೆ ನಿಲ್ಲಿಸಬಾರದು. ಹೃದಯ ಚಲಿಸುತ್ತಲೇ ಇರುವಂತೆ ನೋಡಿಕೊಳ್ಳಬೇಕು. ಆಸ್ಪತ್ರೆ ತಲುಪಿದ ಬಳಿಕ ಉಳಿದ ಕೆಲಸವನ್ನು ವೈದ್ಯರು ನೋಡಿಕೊಳ್ಳುತ್ತಾರೆ. ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಸ್ಥೂಲಕಾಯದ ವ್ಯಕ್ತಿಗಳಿಗೆ ಮಾಡುವಾಗ ಅಲ್ಪಸ್ವಲ್ಪ ಬದಲಾವಣೆ ಅಗತ್ಯವಿರುತ್ತದೆ. ಒಟ್ಟಿನಲ್ಲಿ ಸಿಪಿಆರ್ ಎನ್ನುವುದು ಹೃದಯ ಸ್ತಂಭನಕ್ಕೆ ಒಳಗಾದ ವ್ಯಕ್ತಿಯಿಂದ ಹೃದಯವನ್ನು ಪುನಶ್ಚೇತನಗೊಳಿಸುವ ಸರಳ, ಜೀವರಕ್ಷಕ ಪ್ರಕ್ರಿಯೆಯಾಗಿರುತ್ತದೆ.

ಡಾ|| ಮುರಲೀ ಮೋಹನ್ ಚೂಂತಾರು
BDS, MDS,DNB,MOSRCSEd(U.K),
FPFA, M.B.A
Consultant Oral and Maxillofacial Surgeon
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323
ಮೊ : 0984513578

www.surakshadental.com

RELATED ARTICLES
- Advertisment -
Google search engine

Most Popular