ವರದಿ ರಾಯಿ ರಾಜ ಕುಮಾರ
ಎಲ್ಲಾ ಮಹಿಳೆಯರು, ಬಡವರು, ನ್ಯಾಯಾಂಗದ ಶುಲ್ಕವೇ ಇಲ್ಲದೆ ತೊಂದರೆಗೊಳಗಾದವರಿಗೆ ಉಚಿತ ವಕೀಲರನ್ನು ಒದಗಿಸಿ ನೆರವನ್ನು ನೀಡುವ ಪ್ರಯತ್ನ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನಡೆಯುತ್ತಿದೆ. ಪ್ರಕೃತಿಯ ನೀರು, ಗಾಳಿ ಯಂತೆ ತಾರತಮ್ಯ ರಹಿತವಾಗಿ 3 ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಹೊಂದಿರುವ ಎಲ್ಲರಿಗೂ ಸಮಸ್ಯೆಯ ಪರಿಹಾರಕ್ಕೆ ನ್ಯಾಯಯುತವಾದ ಅವಕಾಶವನ್ನು ಕಾನೂನು ಸೇವೆ ನೀಡಿರುತ್ತದೆ. ಅದಕ್ಕಾಗಿ ತೊಂದರೆಗೊಳಗಾದವರು “15100” ಗೆ ಸಂಪರ್ಕಿಸಿದರೆ ಎಲ್ಲ ರೀತಿಯ ಸಲಹೆ, ಸಹಕಾರ, ಬೆಂಬಲ ಹಾಗೂ ನ್ಯಾಯವನ್ನು ಒದಗಿಸಲು ಪ್ರಯತ್ನಿಸಲಾಗುವುದು. ಜನತಾ ನ್ಯಾಯಾಲಯದಲ್ಲಿ ನಿರ್ಧಾರವಾದುದನ್ನು ಪುನರ್ ಪ್ರಶ್ನಿಸಲು ಅವಕಾಶ ಇರುವುದಿಲ್ಲ. ಈಗಾಗಲೇ ಕರ್ನಾಟಕದಲ್ಲಿ 149 ತಾಲೂಕುಗಳಲ್ಲಿ ಕಾನೂನು ಸೇವಾ ಪ್ರಾಧಿಕಾರಗಳಿದ್ದು ಆರು ತಾಲೂಕುಗಳಿಗೆ ಕಾನೂನು ಸೇವಾ ಪ್ರಾಧಿಕಾರಗಳ ಅಗತ್ಯವಿದೆ. ಅದರಲ್ಲಿ ಅತ್ಯಂತ ತುರ್ತಾಗಿ ರಚನೆಯಾಗಬೇಕಾದುದು ಮೂಡುಬಿದಿರೆಗೆ ಎಂದು ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಶ್ರೀಮತಿ ಜೈಬುನ್ನಿಸ ನೆನಪಿಸಿದರು.
ಅವರು ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ ಸಹಕಾರ ಸಪ್ತಾಹ ಸಂಭ್ರಮದ ಐದನೇ ದಿನದ ಉಚಿತ ಕಾನೂನು ಸೇವೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸಂವಿಧಾನದ 39 ಎ ಅನುಚ್ಛೇದದ ಪ್ರಕಾರ ಅಶಕ್ತರೆಲ್ಲರಿಗೂ ಉಚಿತ ಕಾನೂನು ನೆರವನ್ನು ನೀಡುವ, ತಿಳಿಸುವ ಅಗತ್ಯ ತಿಳಿದವರಿಗಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಶ್ರೀಧರ್ ಎಂ ಸರಕಾರ ಮನೆ ಮನೆಗೆ ಸೇವೆಯನ್ನು ಒದಗಿಸುವ ಪ್ರಯತ್ನ ಮಾಡಿದೆ. ಆದರೂ 10000ಕ್ಕಿಂತ ಹೆಚ್ಚು ರೈತರ ಹೆಸರು ಇನ್ನು ದಾಖಲುಗೊಂಡಿಲ್ಲ. ಈ ಪೌತಿ ಆಂದೋಲನದ ಮೂಲಕ ಆಧಾರ್ ಲಿಂಕ್ ಅನ್ನು ನಡೆಸಿ ಪ್ರಯತ್ನಿಸಲಾಗುತ್ತಿದೆ. ದಾಖಲೆಗಳ ಕೊರತೆಯಿಂದ ಅಂತರ್ಜಾತೀಯ ವಿವಾಹಿತ ಮಕ್ಕಳಿಗೆ ತೊಂದರೆಗಳು ಆಗುತ್ತಿದೆ. ಆದುದರಿಂದ ಪ್ರತಿಯೊಬ್ಬರು ತಮಗಾಗುತ್ತಿರುವ ಕಾನೂನಾತ್ಮಕ ಲೋಪದೋಷಗಳಿಗೆ ನೇರವಾಗಿ ಭೇಟಿಮಾಡಿದಲ್ಲಿ ತಕ್ಷಣ ಸ್ಪಂದಿಸಿ ಪ್ರಾಮಾಣಿಕ ಸಹಾಯವನ್ನು ಒದಗಿಸಲಾಗುವುದು ಎಂದು ಭರವಸೆಯನ್ನು ಇತ್ತರು.
ಅತಿ ಹೆಚ್ಚು ಡಿವಿಡೆಂಟ್ ನೀಡುವ ಮೂಲಕ ತಕ್ಷಣ ಸ್ಪಂದಿಸುವ ಸಿಬ್ಬಂದಿಗಳು ಹಾಗೂ ನಿರ್ದೇಶಕರುಗಳ ಕಾರಣದಿಂದಾಗಿ ಸೊಸೈಟಿ ಜನಾನುರಾಗಿಯಾಗಿ ಬೆಳಗುತ್ತಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹರ್ಷ ವ್ಯಕ್ತಪಡಿಸಿದರು. ಸೊಸೈಟಿ ಕೃಷಿಕರು ಹಾಗೂ ಸಣ್ಣ ಉದ್ಯಮದಾರರಿಗೆ ಹೆಚ್ಚಿನ ಬೆಂಬಲವನ್ನು ನೀಡುತ್ತಿದೆ, ಹಲವಾರು ಪ್ರಗತಿಪರ ಕಾರ್ಯಗಳನ್ನು ಕೈಗೊಂಡಿದೆ ಎಂದು ಸೊಸೈಟಿ ಅಧ್ಯಕ್ಷ ಬಾಹುಬಲಿ ಪ್ರಸಾದ್ ನುಡಿದರು.
ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಕೃಷ್ಣಪ್ಪ, ಹರ್ಷವರ್ಧನ್, ವೃಷಭರಾಜ ಜೈನ್, ಸದಾನಂದ ಪೂಜಾರಿ, ಹರೀಶ್ ಎಂ ಕೆ ಹಾಗೂ ಇತರ ಗಣ್ಯರನ್ನು ಸನ್ಮಾನಿಸಲಾಯಿತು.
ಪ್ರತಿವರ್ಷ 8,000ಕ್ಕೂ ಹೆಚ್ಚು ಸದಸ್ಯರು ಮಹಾಸಭೆಗೆ ಹಾಜರಾಗುತ್ತಿದ್ದಾರೆ. ಸೊಸೈಟಿ ಹಲವಾರು ಕಾನೂನುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಜನರ ಪ್ರೀತಿಯಿಂದ ಉತ್ತಮವಾಗಿ ಲಾಭವನ್ನು ಗಳಿಸುತ್ತಿದೆ. ಒಂದು ದೇಶ ಒಂದು ಕಾನೂನು ಎನ್ನುವುದು ಜಾರಿಯಾಗಲೇಬೇಕು ಎಂದು ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾ ಅಧಿಕಾರಿ ಚಂದ್ರಶೇಖರ್ ಎಂ ಸ್ವಾಗತಿಸಿ ವಾಸ್ತವಿಕ ಮಾತಿನಲ್ಲಿ ಕರೆ ಕೊಟ್ಟರು. ಚೇತನ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಸುದರ್ಶನ್ ವಂದಿಸಿದರು.

