ಗದಗ: ಹೈಸ್ಕೂಲ್ ವಿದ್ಯಾರ್ಥಿಗಳು ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿ, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಗದಗ ತಾಲೂಕಿನ ಹುಲಕೋಟಿ ರೂರಲ್ ಇಂಜಿನಿಯರಿಂಗ್ ಕಾಲೇಜು ಬಳಿ ಘಟನೆ ನಡೆದಿದೆ.
ಹುಲಕೋಟಿ ರಾಜೇಶ್ವರಿ ವಿದ್ಯಾನಿಕೇತನ ಶಾಲೆಯಲ್ಲಿ ವಿದ್ಯಾರ್ಥಿಗಳು 10ನೇ ತರಗತಿ ವಿದ್ಯಾರ್ಥಿಗಳಲ್ಲಿ ಓರ್ವ ಕಾರು ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ, ವೇಗವಾಗಿ ಬಂದ ಕಾರು, ಡಿಕ್ಕಿ ಹೊಡೆದಿದ್ದು, ಮಹಮ್ಮದ್ ಮುಜಾವರ್ (16), ಸಂಜೀವ್ ಗಿರಡ್ಡಿ (16) ಮೃತಪಟ್ಟಿದ್ದಾರೆ. ಆಶಿಸ್ ಗುಂಡುರ್ (16) ಸೇರಿದಂತೆ ಮತ್ತೋರ್ವ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ.
ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಮುಗಿಸಿ ತಡರಾತ್ರಿ ಬರುವ ವೇಳೆ ಅಪಘಾತ ಸಂಭವಿಸಿದೆ. ನಾಲ್ಕು ಜನ ವಿದ್ಯಾರ್ಥಿಗಳು ಮಾತ್ರ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಗ್ಯಾದರಿಂಗ್ ಡ್ಯಾನ್ಸ್ ಮುಗಿಸಿಕೊಂಡು ಜೋಶ್‌ನಲ್ಲಿ ವಾಪಸ್ ಆಗುತ್ತಿದ್ದರು. ಅತಿಯಾದ ವೇಗವೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ.
ಮೃತರ ದೇಹಗಳು ಹಾಗೂ ಓರ್ವ ಗಾಯಾಳು ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮತ್ತೋರ್ವ ಗಾಯಾಳು ವಿದ್ಯಾರ್ಥಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಗದಗ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.