ಬೆಂಗಳೂರು: ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ದ. ಕ. ಜಿಲ್ಲೆಯ ಸುಳ್ಯದ ಶಿವಪ್ರಸಾದ್ ತಮ್ಮ ವಿವಾಹ ಪತ್ರಿಕೆಯಲ್ಲಿ ಮೋದಿಗೆ ಮತ ನೀಡುವಂತೆ ಮನವಿ ಮಾಡಿದ್ದರು. ಈ ಸಂಬಂಧ ಫ್ಲೈಯಿಂಗ್ ಸ್ಕ್ವಾಡ್ ಕೇಸ್ ದಾಖಲಿಸಿದ್ದರು. ಈ ಪ್ರಕರಣ ರದ್ದುಕೋರಿ ಶಿವಪ್ರಸಾದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಚುನಾವಣೆ ನೀತಿ ಸಂಹಿತೆಗಿಂತ ಮೊದಲೇ ಲಗ್ನ ಪತ್ರಿಕೆ ಮುದ್ರಣವಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
2024 ಮಾ. 1ರಂದು ಮದುವೆ ಆಹ್ವಾನ ಪತ್ರಿಕೆ ಮುದ್ರಣವಾಗಿದೆ. ಆದರೆ ಚುನಾವಣಾ ನೀತಿಸಂಹಿತೆ ಮಾರ್ಚ್ 16 ರಂದು ಜಾರಿಯಾಗಿದೆ. ಹೀಗಾಗಿ ಕೇಸ್ ರದ್ದು ಮಾಡುವಂತೆ ವಕೀಲ ಎಂ.ವಿನೋದ್ ಕುಮಾರ್ ಕೋರ್ಟ್ಗೆ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿದ ಹೈಕೋರ್ಟ್ ಏಕಸದಸ್ಯ ಪೀಠ, ಶಿವಪ್ರಸಾದ್ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ದ. ಕ. ಜಿಲ್ಲೆಯ ಕಡಬ ತಾಲೂಕಿನ ಆಲಂತಾಯ ನಿವಾಸಿ ಶಿವಪ್ರಸಾದ್ ತಮ್ಮ ವಿವಾಹದ ಆಹ್ವಾನ ಪತ್ರಿಕೆಯಲ್ಲಿ ‘ಮೋದಿಗೆ ಮತ ಹಾಕಿದರೆ ನನಗೆ ಗಿಫ್ಟ್ ನೀಡಿದಂತೆ’ ಎಂದು ಮುದ್ರಿಸಿದ್ದರು. ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎಂದು ವರನ ವಿರುದ್ಧ ಏಪ್ರಿಲ್ 17ರಂದು ಚುನಾವಣಾ ನೋಡಲ್ ಅಧಿಕಾರಿಗಳಿಗೆ ದೂರು ಬಂದಿತ್ತು. ನಂತರ ಚುನಾವಣಾಧಿಕಾರಿ ನ್ಯಾಯಾಲಯಕ್ಕೆ ಈ ಬಗ್ಗೆ ವರದಿ ಸಲ್ಲಿಸಿ ಮದುಮಗ ಶಿವಪ್ರಸಾದ್ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು.
ಲಗ್ನ ಪತ್ರಿಕೆಯಲ್ಲಿ ನರೇಂದ್ರ ಮೋದಿಗೆ ಮತ ಕೇಳಿದ್ದ ಪ್ರಕರಣ: ಫ್ಲೈಯಿಂಗ್ ಸ್ಕ್ವಾಡ್ ದಾಖಲಿಸಿದ್ದ ಕೇಸ್ ರದ್ದು
RELATED ARTICLES