ಬೆಳ್ತಂಗಡಿ: ಮಳೆ ಬಂದ ಕಾರಣ ಅಂಗಡಿಯ ಜಗುಲಿಯಲ್ಲಿ ಕುಳಿತ ದಲಿತ ವೃದ್ಧನ ಮೇಲೆ ಅಂಗಡಿ ಮಾಲಿಕ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ ಘಟನೆ ಕೊಕ್ಕಡದಲ್ಲಿ ನಡೆದಿದೆ. ಘಟನೆಯ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಕ್ಕಡ ಗ್ರಾಮದ ಮಂಚ ಮೊಗೇರ (67) ಎಂಬವರ ಮೇಲೆ ಹಲ್ಲೆ ನಡೆದಿದೆ. ಕೊಕ್ಕಡ ನಿವಾಸಿ ರಾಮಣ್ಣ ಗೌಡ ಹಲ್ಲೆ ನಡೆಸಿದ ಆರೋಪಿ. ಕೊಕ್ಕಡ ಪೇಟೆಯಿಂದ ಹಿಂದಿರುಗುತ್ತಿದ್ದ ವೇಳೆ ಮಳೆ ಬಂದ ಕಾರಣ ಮಂಚ ಮೊಗೇರ ಅವರು ಕೊಕ್ಕಡ ಹಳ್ಳಿಂಗೇರಿಯ ಅಂಗಡಿಯ ಜಗಲಿಯಲ್ಲಿ ಕುಳಿತಿದ್ದರು. ಇದನ್ನು ಪ್ರಶ್ನಿಸಿದ ಅಂಗಡಿ ಮಾಲಿಕ ರಾಮಣ್ಣ ಗೌಡರೊಂದಿಗೆ ಸುಸ್ತಾದ ಕಾರಣಕ್ಕೆ ಕುಳಿತಿದ್ದೇನೆ. ಮಳೆ ನಿಂತ ಕೂಡಲೇ ಹೊರಡುತ್ತೇನೆ ಎಂದು ಮಂಚ ಮೊಗೇರ ತಿಳಿಸಿದ್ದರು.
ಆದರೆ ಅಂಗಡಿಯ ಒಳಗೆ ಹೋದ ರಾಮಣ್ಣ ಗೌಡ ಮರದ ರೀಪಿನಲ್ಲಿ ಮಂಚ ಮೊಗೇರರ ತಲೆ ಹಾಗೂ ಬೆನ್ನಿಗೆ ಹೊಡೆದು ಗಾಯಗೊಳಿಸಿದ್ದಾರೆ. ಗಾಯಗೊಂಡವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ತಲೆಗೆ ಹಾಗೂ ಬೆನ್ನಿಗೆ ಗಾಯಗಳಾಗಿವೆ. ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.