ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜು ಉಜಿರೆ ಇದರ ಬಿ. ವೋಕ್ ವಿಭಾಗದ ವತಿಯಿಂದ ರಾಜ್ಯ ಮಟ್ಟದ ಅಂತರ್ ಕಾಲೇಜು ಫೆಸ್ಟ್ ‘ಬಿ. ವೋಕ್ ಉತ್ಸವ 2025’ ನಡೆಯಿತು. ವಿವಿಧ ಕಾಲೇಜುಗಳ 300ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದು, ಟೀಂ ಸ್ಪಾರ್ಟನ್ಸ್ ಸಮಗ್ರ ಪ್ರಶಸ್ತಿಯನ್ನು ಪಡೆಯಿತು. ಎಲ್ಲಾ ಸ್ಪರ್ಧೆಗಳ ಬಳಿಕ, ಟೀ ಖಾಬ್ ಮಣಿಪಾಲ ಅವರಿಂದ ಮ್ಯೂಸಿಕಲ್ ಈವ್ನಿಂಗ್ – ಮನೋರಂಜನಾ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅವರು ಜ.2ರಂದು ಉಜಿರೆ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಎಸ್‌ಡಿಎಂ ಕಾಲೇಜಿನ ಬಿ ವೋಕ್ ವಿಭಾಗದ ವತಿಯಿಂದ ನಡೆದ ರಾಜ್ಯ ಮಟ್ಟದ ಪದವಿ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ‘ಬಿ ವೋಕ್ -2025″ ಅನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಬದಲಾಗುತ್ತಿರುವ ವೇಗದ ಕಾಲಮಾನಕ್ಕೆ ಶಿಕ್ಷಣ ಕ್ಷೇತ್ರವೂ ಹೊರತಾಗಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಶಕ್ತಿ ನೀಡಿ ಧನಾತ್ಮಕ ಹಾಗೂ ಗುಣಾತ್ಮಕವಾಗಿ ಪರಿಣಾಮಕಾರಿಯಾಗಲು ಸಂಸ್ಥೆಯಲ್ಲಿ ಬಿ ವೋಕ್ ಕೋರ್ಸ್ ಆರಂಭಿಸಲಾಗಿದೆ. ಜ್ಞಾನದ ಜತೆಗೆ ಪರಿಪಕ್ವತೆಯ ಕೌಶಲ್ಯ ಕಲಿತುಕೊಳ್ಳಬೇಕಾದ ಅನಿವಾರ್ಯತೆಯಿದೆ. ಎಲ್ಲ ಉದ್ಯೋಗ, ಸ್ವಉದ್ಯೋಗದಲ್ಲಿ ಕೌಶಲದಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ಹೇಳಿದರು.
ವಿದ್ಯಾರ್ಥಿಗಳ ಸೃಜನಾತ್ಮಕ ಪ್ರತಿಭೆಗಳನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆಯಾಗಿದ್ದು, ಶಿಕ್ಷಣದ ಜತೆಗೆ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅಪೂರ್ವ ಅವಕಾಶವಾಗಿದೆ ಎಂದು ಅಭಿನಂದಿಸಿದರು.
ಎಸ್‌ಡಿಎಂ ಪ.ಪೂ.ಕಾಲೇಜು ಪ್ರಾಚಾರ್ಯ ಪ್ರಮೋದ್ ಕುಮಾರ್, ವಿದ್ಯಾರ್ಥಿಗಳ ‘ವ್ಯಾಸಂಗಿಗಳ ಕಥೆಗಳು’ ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಸಮಕಾಲೀನ ಸ್ಪರ್ಧಾ ಪ್ರಪಂಚದಲ್ಲಿ ಮುನ್ನುಗ್ಗಿದವನು ಯಶಸ್ವಿಯಾಗುತ್ತಾನೆ. ಶೈಕ್ಷಣಿಕ ಕ್ರಾಂತಿಯಿಂದ ನೂತನ ಶಿಕ್ಷಣ ನೀತಿಯಲ್ಲಿ ಕೌಶಲಗಳಿಗೆ ಆದ್ಯತೆ ಹಾಗೂ ಅವಕಾಶಗಳು ಅಗತ್ಯ ಕೌಶಲ್ಯಾಧಾರಿತ ಶಿಕ್ಷಣದಿಂದ ಜೀವನದಲ್ಲಿ ವೈಫಲ್ಯ ಕಾಣಲು ಸಾಧ್ಯವಿಲ್ಲ. ಪ್ರತಿಯೊಬ್ಬನಲ್ಲೂ ಪ್ರತಿಭೆಯಿದ್ದು, ಅವಕಾಶಗಳು ಮುಕ್ತವಾಗಿದೆ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಪದವಿ ಕಾಲೇಜು ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಮಾತನಾಡಿ, ಮಾನಸಿಕವಾಗಿ ದೈಹಿಕವಾಗಿ, ಸ್ಪರ್ಧೆಗಳನ್ನು ಎದುರಿಸಿ ಪಡೆಯುವ ಅನುಭವ ಮುಂದಿನ ಬದುಕಿಗೆ ಉಪಯೋಗವಾಗುವುದು. ಸ್ಪರ್ಧೆಗಳಲ್ಲಿ ಬಹುಮಾನ ಗಳಿಸುವುದು, ಮುಖ್ಯವಲ್ಲ. ಭಾಗವಹಿಸಿ ಅನುಭವ ಪಡುಯುವುದು ಮುಂದಿನ ಜೀವನಕ್ಕೆ ದಾರಿದೀಪವಾಗಬಲ್ಲುದು. ಮನೋಧರ್ಮ, ಕೌಶಲ್ಯ ಮತ್ತು ಅನುಭವ ಜ್ಞಾನ ನಮ್ಮ ಭವಿಷ್ಯವನ್ನು ರೂಪಿಸುತ್ತದೆ ಎಂದರು.
ಇದೆ ಸಂದರ್ಭದಲ್ಲಿ ಹಂಪಿ ವಿ.ವಿ.ಯಿಂದ ಪಿಎಚ್‌ಡಿ ಪಡೆದ ಬಿವೋಕ್ ಸಂಯೋಜಕ ಸುವೀರ್ ಜೈನ್ ಅವರನ್ನು ವಿಭಾಗದ ಉಪನ್ಯಾಸಕ ವೃಂದದವರು ಅಭಿನಂದಿಸಿದರು.
ಬಿ. ವೋಕ್ ಉತ್ಸವ ಸಂಯೋಜಕ ಡಾ.ಸುವೀರ್ ಜೈನ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನು ಆಡಿದರು. “80 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಬಿ ವೋಕ್ ಕೋರ್ಸ್‌ನಲ್ಲಿ ಇಂದು 5ನೇ ವರ್ಷದಲ್ಲಿ 390 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಪದವಿ ಹಾಗೂ ಪ.ಪೂ. ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಸ್ಪರ್ಧೆ ಹಾಗೂ ಮನರಂಜನೆಗಾಗಿ ಉತ್ಸವ ಆಯೋಜಿಸಲಾಗುತ್ತಿದ್ದು, ಬೇರೆ ಕಾಲೇಜಿನ ವಿದ್ಯಾರ್ಥಿಗಳೂ ಭಾಗವಹಿಸುತ್ತಿದ್ದಾರೆ” ಎಂದರು.
ಡಿಜಿಟಲ್ ಮೀಡಿಯಾ & ಫಿಲಂ ಮೇಕಿಂಗ್ ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ, ರಿಟೇಲ್ & ಸಪ್ಲೈ ಚೇನ್ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥ ಅಶ್ವಿತ್ಥ್ ಎಚ್.ಆರ್. ಮತ್ತು ಸಾಫ್ಟ್ವೇರ್ & ಅಪ್ಲಿಕೇಶನ್ ಡೆವಲಪ್ಮೆಂಟ್ ವಿಭಾಗದ ಕುಸುಮ ಹಾಗೂ ವಿದ್ಯಾರ್ಥಿ ನಾಯಕರಾದ ಸೌರವ್, ಯೋಗೀಶ್ ಮತ್ತು ಐಶ್ವರ್ಯ ಉಪಸ್ಥಿತರಿದ್ದರು.
ದಸ್ಕತ್ ಸಿನಿಮಾ ತಂಡಕ್ಕೆ ಸನ್ಮಾನ
ಸಮಾರೋಪ ಸಮಾರಂಭದಲ್ಲಿ ದಸ್ಕತ್ ಸಿನಿಮಾ ತಂಡವೇ ಉಪಸ್ಥಿತರಿದ್ದದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. 3ನೇ ವಾರದ ಯಶಸ್ವಿ ಓಟ ಮುಂದುವರೆಸಿರುವ ತುಳು ಸಿನಿಮಾ ದಸ್ಕತ್ ಇದರ ನಿರ್ದೇಶಕ ಅನೀಶ್ ಪೂಜಾರಿ ವೇಣೂರು, ಪ್ರೊಡಕ್ಷನ್ ಹೆಡ್ ಸ್ಮಿತೇಶ್ ಬಾರ್ಯಾ, ನಾಯಕ ನಟ ದೀಕ್ಷಿತ್ ಅಂಡಿಂಜೆ ಅವರನ್ನು ತಂಡದ ಪರವಾಗಿ ಸನ್ಮಾನಿಸಲಾಯಿತು. ಇದೇ ಸಿನಿಮಾದ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ ಬಿವೋಕ್ ಡಿಜಿಟಲ್ ಮೀಡಿಯಾ ಹಾಗೂ ಫಿಲ್ಮ್ ಮೇಕಿಂಗ್ ವಿಭಾಗದ ವಿದ್ಯಾರ್ಥಿಗಳಾದ ಲೋಹಿತ್, ಯೋಗೀಶ್, ತರುಣ್, ಪ್ರಜ್ವಲ್ ಹಾಗೂ ಹಳೇ ವಿದ್ಯಾರ್ಥಿಗಳಾದ ಅನೂಪ್, ಆಶ್ರಯ್ ಮತ್ತು ಕೀರ್ತನ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವ್ಯಾಸಂಗಿಗಳ ಕಥೆಗಳು ಪುಸ್ತಕ ಬಿಡುಗಡೆ
ಬಿ. ವೋಕ್ ಡಿಜಿಟಲ್ ಮೀಡಿಯಾ & ಫಿಲ್ಮ್ ಮೇಕಿಂಗ್ ವಿಭಾಗದ ವಿದ್ಯಾರ್ಥಿಗಳು ಪ್ರಾಯೋಗಿಕ ತರಗತಿಗಳಲ್ಲಿ ಬರೆದ ಕಥೆಗಳನ್ನು ಒಳಗಂಡಂತೆ ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ, ಸಹಾಯಕ ಪ್ರಾಧ್ಯಾಪಕರಾದ ಅಶ್ವಿನಿ ಜೈನ್, ಇಂದುಧರ ಹಳೆಯಂಗಡಿ, ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿರಾಟ್ ಪದ್ಮನಾಭ, ಹಳೇ ವಿದ್ಯಾರ್ಥಿಗಳಾದ ಅಭ್ಯುದಯ ಮತ್ತು ಅಮೃತಾ ಅವರು ಬರೆದಿರುವ ಕಥೆಗಳ ಸಂಗ್ರಹ ವ್ಯಾಸಂಗಿಗಳ ಕಥೆಗಳು ಪುಸ್ತಕವನ್ನು ಸಭಾ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.