ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಬರೋಬ್ಬರಿ 19 ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಕಚೇರಿಯಲ್ಲಿ ವಿಜಯೋತ್ಸವದ ಸಂಭ್ರಮ ಆಚರಿಸಲಾಯಿತು. ಲೋಕಸಭಾ ಚುನಾವಣೆಯ ಬಹುತೇಕ ಫಲಿತಾಂಶ ಅಂತಿಮಗೊಳಿಸುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕಚೇರಿಯಿರುವ ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ಹಿರಿಯ ನಾಯಕರ ಸಮ್ಮುಖದಲ್ಲಿ ಸಂಭ್ರಮ ಆಚರಿಸಲಾಯಿತು.
ಬಿಜೆಪಿ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಜಯ ಘೋಷಗಳನ್ನು ಕೂಗಿದರು. ಪಟಾಕಿ ಸಿಡಿಸಿದರು. ಪಕ್ಷದ ಧ್ವಜಗಳನ್ನು ಹಾರಿಸಿದರು. ಕುಣಿದು ಕುಪ್ಪಳಿಸಿದ ಬಿಜೆಪಿ ಕಾರ್ಯಕರ್ತರು ವಿಜಯದ ಸಂಭ್ರಮವನ್ನು ಆಚರಿಸಿಕೊಂಡರು,
ರಾಜ್ಯಾಧ್ಯಕ್ಷ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಪ್ರಮುಖರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದರು.