ಕಚೇರಿಗಳಿಗೆ ತಡವಾಗಿ ಬರುವ ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಹಿರಿಯ ಅಧಿಕಾರಿಗಳು ಸೇರಿದಂತೆ ಎಲ್ಲ ಸರ್ಕಾರಿ ಉದ್ಯೋಗಿಗಳು ಕಚೇರಿಯಲ್ಲಿ ಬೆಳಿಗ್ಗೆ 9ರ ಒಳಗೆ ಹಾಜರಿರಬೇಕು ಎಂದು ಸೂಚಿಸಿದೆ.
ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಗರಿಷ್ಠ 15 ನಿಮಿಷಗಳಷ್ಟು ರಿಯಾಯಿತಿಯನ್ನು ನೀಡಿದೆ.
ಹೀಗಾಗಿ, ಬೆಳಿಗ್ಗೆ 9.15ರ ವೇಳೆಗೆ ಎಲ್ಲ ನೌಕರರು ಕಚೇರಿಗಳಲ್ಲಿ ಹಾಜರಿರುವುದು ಕಡ್ಡಾಯವಾಗಲಿದೆ.
ಒಂದು ವೇಳೆ, 9.15ರ ನಂತರ ಕಚೇರಿಗೆ ಬಂದಲ್ಲಿ, ಸಂಬಂಧಪಟ್ಟ ಉದ್ಯೋಗಿಯದ್ದು ಅರ್ಧ ದಿನ ಸಾಂದರ್ಭಿಕ ರಜೆ ಎಂದು ಪರಿಗಣಿಸಲಾಗುವುದು ಎಂದು ಡಿಒಪಿಟಿ ತಿಳಿಸಿದೆ.
ವಿವಿಧ ಸಚಿವಾಲಯಗಳು ಹಾಗೂ ವಿವಿಧ ಇಲಾಖೆಗಳ ನೌಕರರ ಕಚೇರಿ ಸಮಯ ಬೆಳಿಗ್ಗೆ 9ರಿಂದ ಸಂಜೆ 5.30ರ ವರೆಗೆ. ಈ ನಡುವೆ, ಮಧ್ಯಾಹ್ನ 1ರಿಂದ 1.30ರ ವರೆಗೆ ಊಟಕ್ಕೆ ಬಿಡುವು ಇರಲಿದೆ.
ಇನ್ನು, ಕೇಂದ್ರ ಸರ್ಕಾರದ ಇತರ ಕಚೇರಿಗಳ ಕೆಲಸದ ಸಮಯ ಬೆಳಿಗ್ಗೆ 9.30ರಿಂದ ಸಂಜೆ 6.30 ಇದ್ದು, ಮಧ್ಯಾಹ್ನ 1.30ರಿಂದ 2ರ ವರೆಗೆ ಊಟದ ಬಿಡುವು ಇರಲಿದೆ ಎಂದು ಡಿಒಪಿಟಿ ತನ್ನ ಆದೇಶದಲ್ಲಿ ತಿಳಿಸಿದೆ.
‘ಕೆಲ ನೌಕರರು ಕಚೇರಿಗೆ ತಡವಾಗಿ ಬರುವುದು ಹಾಗೂ ಬೇಗನೆ ಕಚೇರಿಯಿಂದ ಹೊರಡುತ್ತಿರುವುದು ಗಮನಕ್ಕೆ ಬಂದಿದೆ’ ಎಂದೂ ಹೇಳಿದೆ.
ಎಲ್ಲ ನೌಕರರು ಆಧಾರ್ ಸಂಖ್ಯೆ ಆಧರಿತ ಬಯೊಮೆಟ್ರಿಕ್ ಹಾಜರಿ ವ್ಯವಸ್ಥೆಯನ್ನು ಬಳಸಬೇಕು. ಕೋವಿಡ್-19 ಪಿಡುಗಿನ ವೇಳೆ, ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.