ಮಂಗಳೂರು: ನಗರವನ್ನು ಬೆಚ್ಚಿ ಬೀಳಿಸಿರುವ ʻಚಡ್ಡಿ ಗ್ಯಾಂಗ್ʼ ಮತ್ತೊಂದು ಕಳ್ಳತನ ಎಸಗಿರುವ ಶಂಕೆ ವ್ಯಕ್ತವಾಗಿದೆ. ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಣಿಯ ಮನೆಯೊಂದರಲ್ಲಿ ಸೋಮವಾರ ರಾತ್ರಿ ಮತ್ತೊಂದು ಕಳ್ಳತನ ಪ್ರಕರಣ ವರದಿಯಾಗಿದೆ.
ಮನೆಮಂದಿ ಮಲಗಿದ್ದಾಗ ಕಿಟಕಿ ಮುರಿದು ಕಳ್ಳತನ ಮಾಡಲಾಗಿದೆ. ಅಲ್ಲದೆ ಮನೆಯವರ ಕಾರನ್ನೂ ಕಳ್ಳರು ಕದ್ದೊಯ್ದಿದ್ದಾರೆ ಎಂದು ತಿಳಿದುಬಂದಿದೆ. ಮನೆಯಲ್ಲಿದ್ದ ಚಿನ್ನಾಭರಣ ಕಳವಾಗಿದೆ.
ಕಳೆದ ಶನಿವಾರ ನಗರದ ಕೋಡಿಕಲ್ನಲ್ಲಿ ಇಂತಹುದೇ ಮಾದರಿಯ ಕಳ್ಳತನ ನಡೆದಿತ್ತು. ಮನೆಯವರು ಮಲಗಿದ್ದಾಗ ಅವರ ಮಲಗುವ ಕೋಣೆಗೇ ನುಗ್ಗಿ ಕಳ್ಳತನ ಮಾಡಿದ್ದರು. ಮನೆಯ ಕಿಟಕಿ ಮುರಿದು ಕಳ್ಳತನ ಮಾಡಲಾಗಿತ್ತು. ಈ ಕಳ್ಳತನ ಚಡ್ಡಿ ಗ್ಯಾಂಗ್ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಈ ಪ್ರಕರಣದಲ್ಲಿ ಕಳ್ಳರು ಚಡ್ಡಿ, ಬನಿಯನ್ ಧರಿಸಿ ತಲೆಗೆ ಬಟ್ಟೆ ಕಟ್ಟಿಕೊಂಡ ಸಿಸಿಟಿವಿ ಕ್ಯಾಮೆರಾ ದೃಶ್ಯ ವೈರಲ್ ಆಗಿತ್ತು. ಈ ಬಗ್ಗೆ ಪೊಲೀಸರು ನಾಗರಿಕರಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಇದೀಗ ಅದೇ ತಂಡ ಕೋಟೆಕಣಿಯಲ್ಲೂ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.