Sunday, January 19, 2025
HomeUncategorizedಹಿರಿಯ ಬಿಜೆಪಿ ಸಂಸದ, ಮಾಜಿ ಸಚಿವ, ಪ್ರಭಾವಿ ನಾಯಕ ಶ್ರೀನಿವಾಸ್ ಪ್ರಸಾದ್ ಇನ್ನಿಲ್ಲ

ಹಿರಿಯ ಬಿಜೆಪಿ ಸಂಸದ, ಮಾಜಿ ಸಚಿವ, ಪ್ರಭಾವಿ ನಾಯಕ ಶ್ರೀನಿವಾಸ್ ಪ್ರಸಾದ್ ಇನ್ನಿಲ್ಲ

ಮೈಸೂರು:: ಹಿರಿಯ ಬಿಜೆಪಿ ಸಂಸದ, ಮೈಸೂರು-ಚಾಮರಾಜನಗರದ  ಪ್ರಭಾವಿ ನಾಯಕ, ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ವಿ.  ಶ್ರೀನಿವಾಸ  ಪ್ರಸಾದ್ ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆ ಸೇರಿದಂತೆ ವಿವಿಧ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಯೋ  ಸಹಜ ಕಾಯಿಲೆಗಳಿಂದಾಗಿ ಏ.22ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಡಾ. ಸುದರ್ಶನ್ ಬಳ್ಳಾಲ್ ನೇತೃತ್ವದ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಸುಕಿನ ಜಾವ 1:30ರ ವೇಳೆಗೆ ಆಸ್ಪತ್ರೆಯಲ್ಲಿಯೇ ಅವರು ನಿಧನರಾಗಿದ್ದಾರೆ. 76ರ ಹರೆಯದ ಶ್ರೀನಿವಾಸ್ ಪ್ರಸಾದ್ ತೀವ್ರ ಹೃದಯಾಘಾತಕ್ಕೊಳಗಾದರು ಎಂದು ಮೂಲಗಳು ತಿಳಿಸಿವೆ.

ಮೃತರ ಪಾರ್ಥೀವ ಶರೀರವನ್ನು ಮೈಸೂರಿನ ಜಯಲಕ್ಷ್ಮಿಪುರ ನಿವಾಸಕ್ಕೆ ರವಾನೆ ಮಾಡಲಾಗಿದೆ.  ಅಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.

ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕರಾಗಿದ್ದ ಶ್ರೀನಿವಾಸ್ ಪ್ರಸಾದ್ ಎಲ್ಲಾ ಸಮುದಾಯಗಳನ್ನು ಜೊತೆಗೆ ಕರೆದೊಯ್ಯುವ ಸಾಮರ್ಥ್ಯ ಹೊಂದಿದ್ದರು. ರಾಜಕೀಯ ಬೆಳವಣಿಗೆಗಳಲ್ಲಿ ಹಲವು ಪಕ್ಷಗಳಿಂದ ಸ್ಪರ್ಧಿಸಿದ್ದ ಅವರು ಸ್ಪರ್ಧಿಸಿದ್ದ ಎಲ್ಲಾ ಪಕ್ಷಗಳಿಂದ ಗೆದ್ದು ಬರುತ್ತಿದ್ದರು. ಚಾಮರಾಜನಗರ ಮೀಸಲು ಕ್ಷೇತ್ರದಿಂದ ಸ್ಪರ್ದಿಸುತ್ತಿದ್ದರೂ ಸ್ವಂತ ವರ್ಚಸ್ಸಿನಲ್ಲಿ ಗೆಲ್ಲಬಲ್ಲ ರಾಜ್ಯದ ದಲಿತ ನಾಯಕರಲ್ಲಿ ಅವರು ಅಗ್ರಗಣ್ಯರಾಗಿದ್ದರು. ಕಳೆದ ಮಾ.17ರಂದು ರಾಜಕೀಯ ನಿವೃತ್ತಿ ಘೋಷಿಸಿದ್ದ ಅವರು ರಾಜ್ಯ ರಾಜಕಾರಣದಲ್ಲಿ ಮಹತ್ವದ ಪಾತ್ರಗಳನ್ನು ನಿರ್ವಹಿಸಿದವರು. ರಾಜಕೀಯ ನಿವೃತ್ತಿ ಘೋಷಿಸಿದ್ದುದರಿಂದ ರಾಜಕೀಯ ಕ್ಷೇತ್ರದಲ್ಲಿ 50 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಶ್ರೀನಿವಾಸ್ ಪ್ರಸಾದ್ ಗೆ ಈ ಬಾರಿ ಬಿಜೆಪಿ ಸಂಸದರಾಗಿದ್ದರೂ ಟಿಕೆಟ್ ನೀಡಿರಲಿಲ್ಲ. ಈ ನಡುವೆ ಚುನಾವಣೆ ಚಟುವಟಿಕೆಗಳ ನಡುವೆಯೂ ಶ್ರೀನಿವಾಸ್ ಪ್ರಸಾದ್ ರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದರು.

1974ರಲ್ಲಿ ವಿ. ಶ್ರೀನಿವಾಸ್ ಪ್ರಸಾದ್ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸುವ ಮೂಲಕ ಅನಿರೀಕ್ಷಿತ ರಾಜಕೀಯ ಪ್ರವೇಶ ಮಾಡಿದ್ದರು. ಅಲ್ಲಿಂದಾಚೆಗೆ ಅವರು ಹಿಂದೆ ನೋಡಲೇ ಇಲ್ಲ. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ರಾಜಕೀಯದ ವಿವಿಧ ಸ್ಥರಗಳಲ್ಲಿ ಜನಪ್ರಿಯವಾಗಿ ಕೆಲಸ ನಿರ್ವಹಿಸಿ ಸುಪ್ರಸಿದ್ಧರಾಗಿದ್ದರು. 1980ರಲ್ಲಿ ಚಾಮರಾಜ ನಗರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ 33ರ ಹರೆಯದಲ್ಲೇ ಸಂಸತ್ ಸದಸ್ಯರಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದರು.

ಮೃತರು ಪತ್ನಿ, ಮೂವರು ಮಕ್ಕಳು ಮತ್ತು ಅವರ ಬಂಧುಗಳು ಹಾಗೂ ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.  

RELATED ARTICLES
- Advertisment -
Google search engine

Most Popular