ಕಾರ್ಕಳ : ಚಾಮುಂಡಿ ದೇವಿಯ ಅಸ್ತಿತ್ವವನ್ನೇ ಪ್ರಶ್ನಿಸಿ, ಮಹಿಷ ದಸರಾ ಆಚರಣೆ ಮಾಡಿದವರು ಇದೀಗ ಚಾಮುಂಡಿ ದೇವಿಯ ಜಪ ಮಾಡುತ್ತಿದ್ದಾರೆ. ಚಾಮುಂಡಿ ದೇವಿಯಿಂದಲೇ ರಾಜ್ಯದ ಭ್ರಷ್ಟ ಸರ್ಕಾರ ಸಂಹಾರವಾಗಲಿದೆ. ಸರ್ಕಾರವನ್ನು ವಾಮಮಾರ್ಗ ಹಾಗೂ ಮೋಸದಿಂದ ಅಸ್ಥಿರಗೊಳಿಸಲು ಯತ್ನಿಸುತ್ತಿರುವ ದುಷ್ಟಶಕ್ತಿಗಳನ್ನು ತಾಯಿ ಚಾಮುಂಡೇಶ್ವರಿ ದೇವಿಯು ನಿಗ್ರಹಿಸಿ, ನಾಡಿನ ಜನತೆಗೆ ಶಾಂತಿ ನೆಮ್ಮದಿ ಕರುಣಿಸಲಿ
ಎನ್ನುವ ಸರ್ಕಾರದ ಜಾಹೀರಾತು ಹಾಸ್ಯಾಸ್ಪದವಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ದಾಳಿ ನಡೆಯಿತು, ಇತ್ತೀಚೆಗೆ ದಾವಣಗೆರೆಯಲ್ಲಿ ಗಣೇಶೋತ್ಸವ ಮೆರವಣಿಗೆಯಲ್ಲಿ ಮತಾಂಧ ಶಕ್ತಿಗಳು ಕಲ್ಲು ತೂರಾಟ ತಲವಾರು ಝಳಪಿಸಿ ಅಶಾಂತಿ ಸೃಷ್ಟಿಸಿ, ಗಣಪತಿಯನ್ನೇ ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಲಾಯಿತು, ಹಾಗಾದರೆ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುತ್ತಿರುವುದು ಯಾರು? ಮತೀಯ ಶಕ್ತಿಗಳಿಗೆ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ರಾಜ್ಯದ ಜನತೆಗೆ ಶಾಂತಿ ನೆಮ್ಮದಿ ಇಲ್ಲದಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣವನ್ನು ಬಯಲಿಗೆಳೆದು, ಈ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಸಿದ್ದರಾಮಯ್ಯ ಅವರು ಇದೀಗ ತನ್ನ ವಿರುದ್ಧದ ಮುಡಾ ಹಗರಣ ತನಿಖೆಯನ್ನು ಮರೆಮಾಚಲು ದಸರಾ ಹಬ್ಬದ ಶುಭಾಶಯ ಕೋರುವ ಜಾಹೀರಾತು ನೆಪದಲ್ಲಿ ತನ್ನ ತಪ್ಪನ್ನು ಮುಚ್ಚಿ ಹಾಕಲು ವಿಪಕ್ಷಗಳ ವಿರುದ್ಧ ಸುಳ್ಳು ಹಾಗೂ ಅಪಪ್ರಚಾರದ ಪತ್ರಿಕಾ ಜಾಹೀರಾತು ಮೂಲಕ ಜನರನ್ನು ದಿಕ್ಕುತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ರಾಜ್ಯದ ಜನತೆಗೆ ಸತ್ಯ ಏನೆಂದು ಚೆನ್ನಾಗಿ ಗೊತ್ತಿದೆ. ಹಣೆಯಲ್ಲಿ ನಾಮ ಹಾಕಿದವರನ್ನು ಕಂಡರೆ ನನಗೆ ಭಯವಾಗುತ್ತದೆ ಎಂದ ಸಿದ್ದರಾಮಯ್ಯ ಅವರು ಇದೀಗ ತಾಯಿ ಚಾಮುಂಡೇಶ್ವರಿಯ ಜಪ ಮಾಡುತ್ತಿದ್ದಾರೆ, ನವರಾತ್ರಿಯ ಈ ಶುಭ ಸಂದರ್ಭದಲ್ಲಿ ದೇವಿಯು 9 ಅವತಾರಗನ್ನು ಎತ್ತಿ ದುಷ್ಟ ಶಕ್ತಿಗಳನ್ನು ನಿಗ್ರಹಿಸಿ ಶಿಷ್ಟರ ರಕ್ಷಣೆ ಮಾಡುತ್ತಾಳೆ. ವಿಜಯದಶಮಿಯ ಬಳಿಕ ಚಾಮುಂಡೇಶ್ವರಿ ತಾಯಿಯೇ ಸಿದ್ದರಾಮಯ್ಯ ಅವರನ್ನು ಕಿತ್ತೊಗೆಯುವುದು ನಿಶ್ಚಿತ.