ಧಾರವಾಡ: ರಾಜಕೀಯ ಕ್ಷೇತ್ರದ ಸಜ್ಜನ,ಸಚ್ಚಾರಿತ್ರ್ಯದ ಸಾಧಕ ಚಂದ್ರಕಾಂತ ಬೆಲ್ಲದ ಅವರಿಗೆ ಅಖಿಲಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ನೀಡುವ ಕರ್ನಾಟಕ ರಾಜಕೀಯ ರತ್ನ ಗೌರವವನ್ನು ಅವರ ನಿವಾಸದಲ್ಲಿ ಗುರುವಾರ ಪ್ರದಾನಿಸಲಾಯಿತು. ಸಚ್ಚಾರಿತ್ರ್ಯವಂತ ಶಾಸಕರನ್ನು ಮತ್ತು ಸಂಸದರನ್ನು ಸಮಾಜಕ್ಕೆ ನೀಡುವುದು ರಾಜಕೀಯ ಪಕ್ಷಗಳ ಕರ್ತವ್ಯ. ನನಗೆ ನಿಜಲಿಂಗಪ್ಪ ರಾಜಕೀಯದ ಮಾದರಿ ವ್ಯಕ್ತಿತ್ವ ಎಂದು ಚಂದ್ರಕಾಂತ ಗುರುವಪ್ಪ ಬೆಲ್ಲದ ಅವರು ಅಭಿಪ್ರಾಯ ಪಟ್ಟರು. ಜನರ ಪ್ರೇರಣೆಯಿಂದ ರಾಜಕೀಯಕ್ಕೆ ಬಂದೆ. ಶಾಸಕರ ಕೆಲಸ ಜನಸೇವೆ ಕ್ಷೇತ್ರದ ಅಭಿವೃದ್ಧಿ ಕಾರ್ಯ ಮಾಡಬೇಕಾದ್ದು ಜವಬ್ದಾರಿ. ನನ್ನ ಸೇವೆಯನ್ನು ಗುರುತಿಸಿ ಉಡುಪಿಯಿಂದ ಇಲ್ಲಿವರೆಗೆ ಬಂದು ಈ ರೀತಿ ಗೌರವಿಸಿರುವುದು ಸಂತೋಷ. ಸಂಸ್ಥೆಯ ಉದ್ದೇಶ ಚೆನ್ನಾಗಿದೆ ಶುಭವಾಗಲಿ ಎಂದು ಅವರು ಸನ್ಮಾನ ಸ್ವೀಕರಿಸಿ ಹೇಳಿದರು. ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ಅವರು ಬೆಲ್ಲದರ ಕಳಂಕರಹಿತ ವ್ಯಕ್ತಿತ್ವಕ್ಕೆ ಈ ಗೌರವ ಎಂದು ಹೇಳಿದರು. ಶ್ರೀಮತಿ ಲೀಲಾವತಿ ಚಂ. ಬೆಲ್ಲದ , ಕೃಷಿ ಕಾಮಧೇನು ಸಂಪಾದಕ ಡಾ.ವಿರೂಪಾಕ್ಷ ಬಡಿಗೇರ, ಸಮಿತಿಯ ಮಕ್ಕಳ ವಿಭಾಗದ ಸಂಚಾಲಕ ಸುನಿಧಿ ಎಸ್ ಅಜೆಕಾರು ಸಹಿತ ಗಣ್ಯರು ಉಪಸ್ಥಿತರಿದ್ದರು.