ದಾವಣಗೆರೆ – ದಾವಣಗೆರೆ ಮಹಾನಗರ ಪಾಲಿಕೆಯಿಂದ 69ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದಾವಣಗೆರೆಯ ಹೆಸರಾಂತ ದಾನಿಗಳಾದ ಚನ್ನಗಿರಿ ವಂಶದ ಚನ್ನಗಿರಿ ವಿರೂಪಾಕ್ಷಪ್ಪನವರಿಗೆ “ನಾಗರೀಕ ಸನ್ಮಾನ” ನೀಡಿ ಗೌರವಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಮೇಯರ್ ಕೆ. ಚಮನ್‌ಸಾಬ್ ತಿಳಿಸಿದರು.
ನವೆಂಬರ್ 30 ರಂದು ಶನಿವಾರ ಸಂಜೆ 5-30ಕ್ಕೆ ಮಹಾನಗರ ಪಾಲಿಕೆಯ ಹೊರಾಂಗಣದಲ್ಲಿ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗ ಮಂದಿರದ ಭವ್ಯ ದಿವ್ಯ ವೇದಿಕೆಯಲ್ಲಿ ದಾವಣಗೆರೆಯ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್‌ರವರು ಸಮಾರಂಭ ಉದ್ಘಾಟಿಸಿ ಚನ್ನಗಿರಿ ವಿರೂಪಾಕ್ಷಪ್ಪನವರಿಗೆ ಸನ್ಮಾನಿಸುತ್ತಾರೆ.
ಒಂದು ಶತಮಾನ ಹತ್ತಿರದಲ್ಲೇ ಅಯುಷ್ಯ ಇರುವ ಇಂತಹ ಇಳಿ ವಯಸ್ಸಿನಲ್ಲೂ ಯುವಕರಿಗೆ ಮಾದರಿಯಂತೆ ನಗರದ ನಾಗರೀಕರಿಗೆ ಸಮಯ ಪ್ರಜ್ಞೆ ಮೂಡಿಸುವ ಗಡಿಯಾರ ಗೋಪುರ ಅಂದಿನಿಂದ ಇಂದಿನವರೆಗೂ ಕಾರ್ಯನಿರ್ವಹಿಸುತ್ತಿರುವ ಹಾಗೂ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಸಮಾಜ ಸೇವೆಗಳಲ್ಲಿ ನಿರಂತರವಾಗಿ ಕಠಿಣ ಪರಿಶ್ರಮದಿಂದ ಆರ್ಥಿಕ ಸಹಕಾರ, ಸಹಯೋಗ ನೀಡುತ್ತಿರುವ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ, ಉಚಿತ ಕಲ್ಯಾಣ ಮಂಟಪ, ಉಚಿತವಾಗಿ ವಿದ್ಯಾರ್ಥಿಗಳಿಗೆ ವಸತಿಗೃಹ ಹೀಗೆ ನೂರಾರು ದಾನ ಧರ್ಮದ ಸಾಧನೆಯನ್ನು ಗುರುತಿಸಿ ಇವರನ್ನು ಈ ಗೌರವ ಪೂರ್ವಕ ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸವಿತಾ ಗಣೇಶ್ ಹುಲ್ಲುಮನೆ ಪ್ರಕಟಿಸಿದ್ದಾರೆ.
99ನೇ ವಯಸ್ಸಿನ ಬಾಲ್ಯದಿಂದಲೇ ಚನ್ನಗಿರಿ ಮನೆತನ ನಿರ್ವಹಿಸುತ್ತಿರುವ ಚನ್ನಗಿರಿ ವಿರೂಪಾಕ್ಷಪ್ಪನವರಿಗೆ ಚನ್ನಗಿರಿ ವಂಶ, ರಾಜನಹಳ್ಳಿ ಮನೆತನ, ಆರ್ಯ ವೈಶ್ಯ ಸಮಾಜ, ಕಲಾಕುಂಚ, ಸಿನಿಮಾಸಿರಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸರ್ವಸದಸ್ಯರು ಈ ಪ್ರಶಸ್ತಿಗೆ ಭಾಜನರಾಗುತ್ತಿರುವ ಇವರಿಗೆ ಅಭಿಮಾನದಿಂದ ಅಭಿನಂದಿಸಿದ್ದಾರೆ.