Friday, February 14, 2025
Homeಉಡುಪಿರಾಷ್ಟ್ರೀಯ ಹೆದ್ದಾರಿ-66 ರ ಅವ್ಯವಸ್ಥೆ- ಸಂಸದ ಕೋಟ ಧರಣಿ ಎಚ್ಚರಿಕೆಗೆ ಧಾವಿಸಿ ಬಂದ ಆರ್.ಓ ಆಫೀಸ್‌ನ...

ರಾಷ್ಟ್ರೀಯ ಹೆದ್ದಾರಿ-66 ರ ಅವ್ಯವಸ್ಥೆ- ಸಂಸದ ಕೋಟ ಧರಣಿ ಎಚ್ಚರಿಕೆಗೆ ಧಾವಿಸಿ ಬಂದ ಆರ್.ಓ ಆಫೀಸ್‌ನ ಅಧಿಕಾರಿಗಳು ತುರ್ತು ಕ್ರಮದ ಭರವಸೆ

ಉಡುಪಿ: ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಸಂತೆಕಟ್ಟೆ ಅಂಡರ್ ಪಾಸ್ ಅವ್ಯವಸ್ಥೆ, ಕಾಪು ಕ್ಷೇತ್ರದ ಉಚ್ಚಿಲ ಪೇಟೆಯಲ್ಲಿ ನಿರಂತರ ಅಪಘಾತ, ವಿಪರೀತ ಸಾವು ನೋವುಗಳ ಬಗ್ಗೆ ನಿರಂತರವಾಗಿ ಹೆದ್ದಾರಿ ಪ್ರಾಧಿಕಾರದ ಗಮನ ಸೆಳೆಯುತ್ತಿದ್ದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳ ವಿಳಂಬ ನೀತಿ ವಿರೋಧಿಸಿ, ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ-66 ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಯ ಕಚೇರಿಯ ಎದುರು ಧರಣಿ ನಡೆಸುವುದಾಗಿ 3 ದಿನದ ಹಿಂದೆ ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ ಅಧಿಕಾರಿಗಳು ಇಂದು ಬೆಳಿಗ್ಗೆ ಉಡುಪಿಗೆ ಬಂದು ಸಂಸದ ಮತ್ತು ಜಿಲ್ಲಾಡಳಿತದ ಜೊತೆ ಸ್ಥಳದಲ್ಲೇ ಸಮಗ್ರ ಚರ್ಚೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಯಾದ ವಿಲಾಸ್ ಪಿ. ಬ್ರಾಹ್ಮಣ್‌ಕರ್ ರವರ ತಂಡ ಕಲ್ಯಾಣಪುರ ಸಂತೆಕಟ್ಟೆಯ ಅಂಡರ್ ಪಾಸ್ ಕಾಮಗಾರಿಯ ನಡೆಯುವ ಸ್ಥಳಕ್ಕೆ ಭೇಟಿಯಿತ್ತು, ಉಡುಪಿಯಿಂದ ಕುಂದಾಪುರಕ್ಕೆ ಹೋಗುವ ಎಡ ಮತ್ತು ಕುಂದಾಪುರದಿಂದ ಉಡುಪಿ ಕಡೆ ಬರುವ ಬಲ ಮೇಲ್ಸೇತುವೆಯ ರಸ್ತೆಗಳನ್ನು ತುರ್ತು ಡಾಂಬರೀಕರಣ ಮಾಡುವುದಾಗಿ ಒಪ್ಪಿದರು. ಮಾತ್ರವಲ್ಲ, ಕೂಡಲೇ ಡಾಂಬರೀಕರಣದ ಕಾಮಗಾರಿ ಆರಂಭಿಸಿದರು. ತಳ ಭಾಗದ ಮುಖ್ಯ ರಸ್ತೆಯನ್ನು 3 ದಿನಗಳ ಒಳಗೆ ಡಾಂಬರೀಕರಣ ಪೂರ್ಣ ಮಾಡುವುದಾಗಿ ತಿಳಿಸಿ, ವಾಹನ ಸವಾರರಿಗೆ ಧೂಳಿನಿಂದ ಮುಕ್ತಿ ನೀಡುವುದಾಗಿ ಭರವಸೆ ನೀಡಿದರು. ಉಳಿದಂತೆ 2 ಪಾರ್ಶ್ವಗಳ ತಡೆಗೋಡೆ ರಚನೆಯ ಮುಕ್ತಾಯಕ್ಕೆ ಕೆಲ ದಿನಗಳ ಸಮಯ ಕೋರಿದರು. ಸಾರ್ವಜನಿಕ ರಸ್ತೆಯನ್ನು ತುರ್ತಾಗಿ ಜನರ ಓಡಾಟಕ್ಕೆ ಸಮರ್ಪಕಗೊಳಿಸಿದರೆ ತನ್ನ ಅಭ್ಯಂತರವಿಲ್ಲ ಎಂದು ಸಂಸದರು ತಿಳಿಸಿ ವಾಹನ ಸಂಚಾರದ ವ್ಯವಸ್ಥೆ ಸರಿಪಡಿಸಲು ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಂಡ ಕಾಪುವಿನ ಬಳಿ ಉಚ್ಚಿಲ ಬಸ್ ನಿಲ್ದಾಣದ ಕ್ರಾಸಿಂಗ್‌ನಲ್ಲಿ ಅವ್ಯವಸ್ಥೆ, ಮುಳೂರು ಶಾಲೆಯ ಬಳಿ ಅವೈಜ್ಞಾನಿಕ ಯೂ ಟರ್ನ್, ರಾಷ್ಟ್ರೀಯ ಹೆದ್ದಾರಿಯ ದಾರಿದೀಪದ ಸಮಸ್ಯೆ, ಸರ್ವೀಸ್ ರೋಡ್ ನಲ್ಲಿ ಹಂಪ್‌ಗಳ ನಿರ್ಮಾಣ, ರಸ್ತೆಯ ಬಳಿಯ ಒಳಚರಂಡಿ ಅವ್ಯವಸ್ಥೆ, ರಿಫ್ಲೆಕ್ಟರ್ ಅಳವಡಿಕೆ, ಮಹಾಲಕ್ಷ್ಮೀ ದೇವಸ್ಥಾನದ ಬಳಿ ಶಾಲಾ ವಲಯದಲ್ಲಿ ಅಂಡರ್ ಪಾಸ್ ಬೇಡಿಕೆಯ ಬಗ್ಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಅಧಿಕಾರಿಗಳಿಗೆ ಮನವರಿಕೆ ಮಾಡಿ ತುರ್ತಾಗಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿದರು. ಉನ್ನತ ಅಧಿಕಾರಿಗಳ ತಂಡ ಅಂಬಲಪಾಡಿಯ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದರು. ಸಂಸದರೊಂದಿಗೆ, ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್, ಅಪರ ಜಿಲ್ಲಾಧಿಕಾರಿ ನಾಗರಾಜ ನಾಯಕ್, ಯೋಜನಾ ನಿರ್ದೇಶಕ ಜಾವೇದ್ ಅಜ್ಮಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಗಫೂರ್ ಮುಂತಾದವರು ಹಾಜರಿದ್ದರು

RELATED ARTICLES
- Advertisment -
Google search engine

Most Popular