ಹೆಬ್ರಿ :ಹೆಬ್ರಿ ತಾಲೂಕು ಚಾರ ಮೇಲ್ಬೆಟ್ಟು ಶ್ರೀ ಬೈದರ್ಕಳ, ಶಿವರಾಯ ಗರೋಡಿ ನೂತನ ಶಿಲಾಮಯ ಗರೋಡಿಯ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಮಾ. 2ರಂದು ಗರೋಡಿ ವಠಾರದಲ್ಲಿ ನಡೆಯಿತು.
ಗರೋಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಗೌರವಾಧ್ಯಕ್ಷ ಬಿ. ಹರ್ಷ ಶೆಟ್ಟಿ, ಮತ್ತು ಆರ್ಥಿಕ ಸಮಿತಿ ಅಧ್ಯಕ್ಷ ಚಾರ ವಾದಿರಾಜ ಶೆಟ್ಟಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಸುಮಾರು 475 ವರ್ಷ ಇತಿಹಾಸ ಹೊಂದಿರುವ ಗರೋಡಿಯನ್ನು ಸುಮಾರು 4 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು ಚಾರ, ಕೆರೆಬೆಟ್ಟು ಮತ್ತು ಕಳ್ತೂರು ಗ್ರಾಮಗಳ 1650 ಮನೆಗಳ 10 ಸಾವಿರಕ್ಕೂ ಮಿಕ್ಕಿದ ಭಕ್ತ ಸಮೂಹವಿದ್ದು, ಜೀರ್ಣೋದ್ದಾರ ಕಾರ್ಯಗಳಲ್ಲಿ ದಾನಿಗಳ, ಭಕ್ತರ ತನು ಮನ, ಧನದ ಸಹಕಾರ ಬೇಕಾಗಿದೆ ಎಂದರು.
ವೇದಮೂರ್ತಿ ಹೆರ್ಗ ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನದಲ್ಲಿ ಶಂಕುಸ್ಥಾಪನೆಗೊಂಡು ಬ್ರಹ್ಮಬೈದರ್ಕಳ, ಶಿವರಾಯ ಶಿಲಾಮಯ ಗರೋಡಿಯ ಕೆಲಸಕಾರ್ಯಗಳು ಭರದಿಂದ ಸಾಗುತ್ತಿದ್ದು, ಪುನರ್ ಪ್ರತಿಷ್ಠೆ, ಬ್ರಹ್ಮ ಕಳಶೋತ್ಸವವು ಏಪ್ರಿಲ್ 1ರಿಂದ ಎ. 9 ರ ತನಕ ವಿಜೃಂಭಣೆಯಿಂದ ನಡೆಯಲಿದೆ. ಜೀರ್ಣೋದರ ಸಮಿತಿಯೊಂದಿಗೆ ವಿವಿಧ ಉಪಸಮತಿಗಳನ್ನು ರಚಿಸಿದ್ದು ಈಗಾಗಲೇ ಉಪಸಮಿತಿಗಳು ಕಾರ್ಯಪ್ರವೃತ್ತವಾಗಿವೆ.
ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಚಾರ ಪಂಚಾಯತ್ ಅಧ್ಯಕ್ಷ ದಿನೇಶ್ ಶೆಟ್ಟಿ, ಗರೋಡಿ ಅನುವಂಶಿಕ ಮೊಕ್ತೇಸರ ಸುರೇಶ್ ಹೆಗ್ಡೆ ತಾರಾಳಿ, ಅರ್ಚಕ ಸುಬ್ರಮಣ್ಯ ಹೇರಳೆ, ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಶೆಟ್ಟಿ, ವಿಜಯ ಹೆಗ್ಡೆ ಕಳ್ತೂರು, ಮಿಥುನ್ ಶೆಟ್ಟಿ ಬಾವಿಗದ್ದೆಮನೆ , ಅಣ್ಣಪ್ಪ ಕುಲಾಲ್, ರವಿ ಪೂಜಾರಿ ಸಂತೆಕಟ್ಟೆ, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.