ಸಮುದಾಯದ ಅಶಕ್ತ ಬಂಧುಗಳ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಧನ ಸಂಗ್ರಹದ ಮೂಲಕ ಆರ್ಥಿಕ ಸಹಕಾರ ನೀಡಲು ಒಗ್ಗೂಡಿದ ಸಮಾನ ಮನಸ್ಕ ಯುವಕರ ತಂಡವೇ ಈ ಕುಲಾಲ ಚಾವಡಿ.
ಕೇವಲ ಸಾಮಾಜಿಕ ಜಾಲತಾಣದ ಮೂಲಕವೇ ಸಂಕಷ್ಟ ಪೀಡಿತರ ದಯನೀಯ ಸ್ಥಿತಿಯ ಬಗ್ಗೆ ಸಚಿತ್ರ ವರದಿ ನೀಡಿ ದೇಶ ವಿದೇಶದಲ್ಲಿರುವ ಸಮುದಾಯದ ಸಹೃದಯಿ ದಾನಿಗಳ ಮುಖಾಂತರ ಮತ್ತು ಸ್ಥಳೀಯ ಸಮುದಾಯ ಬಂಧುಗಳ ಜೊತೆಗೂಡಿ ಆರ್ಥಿಕ ನೆರವಿನ ಪುಟ್ಟ ಪುಟ್ಟ ಗಂಟುಗಳನ್ನು ಎತ್ತಿಕೊಂಡು ಅಶ್ರಿತರ ಮನೆಯಂಗಳ ತಲುಪಿ ಅವರ ನೋವಿನ ವ್ಯಥೆಯ ಕಥೆಗೆ ಕಿವಿಯಾಗಿ, ದುಃಖಕ್ಕೆ ಸಾಂತ್ವನದ ಹೆಗಲಾಗಿ, ಆತ್ಮಸ್ಥೈರ್ಯ ಮತ್ತು ಬದುಕಿನ ಭರವಸೆಗೆ ಗಟ್ಟಿ ಧ್ವನಿಯಾಗಿ ನೂರಾರು ಸಹೃದಯಿ ದಾನಿಗಳು ಪ್ರಾಂಜಲ ಮನಸ್ಸಿನಿಂದ ನೀಡಿದ ತಮ್ಮ ಶ್ರಮ ಮತ್ತು ಹಾರೈಕೆಯ ಪುಟ್ಟ ಪುಟ್ಟ ಗೊಂಚಲುಗಳನ್ನು ಒಂದು ಇಡುಗಂಟು ಮಾಡಿ ಸಂತ್ರಸ್ತರ ಮಡಿಲಲ್ಲಿಟ್ಟು ನಿಮ್ಮ ಕಷ್ಟಕ್ಕೆ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಒಂದು ಮಾತಿನ ಭರವಸೆಯ ಮೂಲಕ ಆತ್ಮಬಲಕ್ಕೆ ಆನೆಬಲ ತುಂಬುವ ಪ್ರಯತ್ನವನ್ನು ಕುಲಾಲ ಚಾವಡಿ ಕಳೆದ ಹತ್ತು ವರ್ಷಗಳಿಂದ ಮಾಡುತ್ತಾ ಬಂದಿದೆ.
ಈ ಕೈಂಕರ್ಯದಲ್ಲಿ ಚಾವಡಿಗೆ ಬೆನ್ನಿಗೆ ನಿಂತು ಬೆಂಬಲ ನೀಡಿದ ಚಾವಡಿ ಬಂಧುಗಳಲ್ಲಿ ಬಹಳಷ್ಟು ಮಂದಿ ಉದ್ಯೋಗ, ಉದ್ಯಮದ ನಿಮಿತ್ತ ದೇಶ ವಿದೇಶಗಳಲ್ಲಿ ಇದ್ದರೂ ಚಾವಡಿಯ ಒಂದು ಮನವಿಗೆ ಕ್ಷಿಪ್ರವಾಗಿ ಸ್ಪಂದಿಸುತ್ತಾರೆ ಅಂತೆಯೇ ಸ್ಥಳೀಯ ಬಂಧುಗಳ ಸ್ಪಂದನೆಯೂ ಅದ್ಭುತವಾಗಿರುತ್ತದೆ. ಈ ಎಲ್ಲಾ ಚಾವಡಿ ಬಂಧುಗಳನ್ನು ಒಗ್ಗೂಡಿಸುವ ಪುಟ್ಟ ಪ್ರಯತ್ನದ ಸುಂದರ ಕಲ್ಪನೆಯೇ ಚಾವಡಿ ಸಂಬ್ರಮ.
ಇಲ್ಲಿ ಅನುಕೂಲವಿರುವ ಎಲ್ಲಾ ಚಾವಡಿ ಬಂಧುಗಳು ತಮ್ಮ ತಮ್ಮ ಕುಟುಂಬ ಸದಸ್ಯರೊಡನೆ ದಿನವಿಡೀ ಕೂಡಿ ಕಲೆತು ಊಟ, ಆಟದ ಗೌಜು ಗಮ್ಮತ್ತಿನಲ್ಲಿ ನಿತ್ಯ ಜೀವನದ ಜಂಜಾಟದಿಂದ ಒಂದಿನಿತು ಮುಕ್ತಿ ಪಡೆದು ಮನಸ್ಸನ್ನು ಪ್ರಫುಲ್ಲಗೊಳಿಸಿ ಚಾವಡಿಯ ಧ್ಯೇಯವನ್ನು ಮತ್ತಷ್ಟು ಸದೃಢ ಗೊಳಿಸಿ ಸಮುದಾಯದ ಉತ್ಸಾಹಿ ಮನಸ್ಸುಗಳ ಜೊತೆಯಾಗಿಸಿ ಮುಂದೆ ಸಾಗುವ ಯೊಜನೆ.
ಈ ಬಾರಿ ಆಯೋಜನೆ ಗೊಂಡ ಆರನೇ ವರ್ಷದ ಚಾವಡಿ ಸಂಬ್ರಮ ನಿಸರ್ಗದತ್ತವಾದ ಪ್ರಾಕೃತಿಕ ಸೊಬಗನ್ನು ಹೊತ್ತು ನಿಂತ ಬೇಲಾಡಿಯ ಸುಂದರ ಪರಿಸರದ ತಾಣ. ಚಿಕ್ಕದಾಗಿ ಚೊಕ್ಕವಾಗಿ ಮೈ ಮನವ ಮುದಗೊಳಿಸಿ, ಹರ್ಷೋಲ್ಲಾಸದ ಹೊಳೆ ಹರಿಸಿ, ಚಿತ್ತ ಭಿತ್ತಿಯಲ್ಲಿ ನಿತ್ಯ ನೆನಪಿನ ಚಿಲುಮೆ ಸ್ಪುರಿಸಿ ಚಿತ್ತಸ್ಥಾಯಿಯಾಗಿಸಿದ ಈ ಕಾರ್ಯಕ್ರಮದ ಯಶಸ್ಸಿನ ನೈಜ ರೂವಾರಿಗಳು ಬೇಲಾಡಿ ಪರಿಸರದ ಸಮುದಾಯ ಬಂಧುಗಳು. ನಿಮ್ಮ ಸೇವೆಗೆ ನಮ್ಮದೊಂದು ಕೊಡುಗೆ ಅನ್ನುವ ಸಮರ್ಪಣಾ ಭಾವದಿಂದ ಸ್ಪಂದಿಸಿದ ಪ್ರಭಾಕರ್ ಕುಲಾಲ್, ಕಾಂತಾವರ ಕುಲಾಲ ಸಂಘದ ಅಧ್ಯಕ್ಷರಾದ ವಿಠಲ್ ಕುಲಾಲ್, ಪ್ರದೀಪ್ ಕುಲಾಲ್, ಯೋಗೀಶ್ ಕುಲಾಲ್, ಹಿರಿಯರಾದ ಶಂಕರ್ ಕುಲಾಲ್, ಬೊಗ್ಗು ಮೂಲ್ಯ, ನಾನಿಲ್ತಾರ್ ಸಂಘದ ಯುವ ವೇದಿಕೆಯ ಅಧ್ಯಕ್ಷರಾದ ದೀಪಕ್ ಬೆಳ್ಮಣ್, ಸುಕೇಶ್ ಕುಲಾಲ್ ಹಾಗೂ ಸಮಾರೋಪ ಸಮಾರಂಭದ ಸಭಾ ವೇದಿಕೆಯ ಅಲಂಕರಿಸಿದ ಚಾವಡಿಯ ಸಹ ನಿರ್ವಾಹಕರಾದ ಸುಧೀರ್ ಬಂಗೇರ, ಸಂದೇಶ್ ಕುಲಾಲ್, ಸತೀಶ್ ಕಜ್ಜೋಡಿ ಮತ್ತು ಮಹಿಳಾ ವಿಭಾಗದ ಸುಮತಿ ಕುಲಾಲ್ ಮತ್ತು ಚಾವಡಿಯ ವಾರ್ಷಿಕ ಧನ ಸಹಾಯದ ವರದಿ ವಾಚಿಸಿ ಕಾರ್ಯಕ್ರಮವನ್ನು ನಿರೂಪಿಸಿದ ಇನ್ನೋರ್ವ ಸಹ ನಿರ್ವಾಹಕರಾದ ಹೃದಯ್ ಕುಲಾಲರಿಗೆ ಅಂತೆಯೇ ವಿವಿಧ ವಿನೋದಮಯ ಆಟಗಳನ್ನು ಆಡಿಸಿ ಚಾವಡಿ ಸಂಭ್ರಮಕ್ಕೆ ರಂಜನೀಯ ಮೆರುಗು ತುಂಬಿದ ಸಮುದಾಯದ ಭವಿಷ್ಯದ ಓರ್ವ ಭರವಸೆಯ ನಿರೂಪಕ ಕಾಂತಾವರ ಕುಲಾಲ ಸಂಘದ ಕಾರ್ಯದರ್ಶಿ ಮಹೇಶ್ ಕುಲಾಲ್ ರವರಿಗೂ ಚಾವಡಿ ನಿರ್ವಾಹಕರಾದ ಸಂತೋಷ್ ಕುಲಾಲ್ ಕೃತಜ್ಞತೆ ಸಲ್ಲಿಸಿದರು.
ವರದಿ:- ಸತೀಶ್ ಕಜ್ಜೋಡಿ