ಉಡುಪಿ: ಮದ್ಯದ ನಶೆಯಲ್ಲಿದ್ದ ವ್ಯಕ್ತಿಯ ಬಳಿ ಅಸಹಾಯಕ ಸ್ಥಿತಿಯಲ್ಲಿದ್ದ ಮಗುವನ್ನು ಇಂದ್ರಾಳಿ ರೈಲ್ವೆ ಸೇತುವೆ ಬಳಿ ರಕ್ಷಿಸಲಾಗಿದೆ. ಸ್ಥಳೀಯರ ಮಾಹಿತಿಯನ್ವಯ ಸ್ಥಳಕ್ಕಾಗಮಿಸಿದ ಮಹಿಳಾ ಪೊಲೀಸರು, ಸಮಾಜ ಸೇವಕರ ಮೂಲಕ ರಕ್ಷಿಸಿದ್ದಾರೆ. ಲಕ್ಷ್ಮಿನಗರದ ಕೃಷ್ಣಾನುಗ್ರಹ ದತ್ತು ಸ್ವೀಕಾರ ಕೇಂದ್ರಕ್ಕೆ ಮಗುವನ್ನು ಒಪ್ಪಿಸಿ ಆಶ್ರಯ ಕಲ್ಪಿಸಲಾಗಿದೆ.
ವಿಪರೀತ ಮದ್ಯಪಾನ ಮಾಡಿದ್ದ ವ್ಯಕ್ತಿಯು ಮಗು ತನ್ನದೆಂದು ಹೇಳಿಕೊಳ್ಳುತ್ತಿದ್ದನಾದರೂ, ಸಮರ್ಪಕ ದಾಖಲೆ ಇಲ್ಲದಿರುವುದು ಮತ್ತು ಅಸ್ಪಷ್ಟ ವಿವರಗಳನ್ನು ನೀಡಿರುವುದರಿಂದ ಮಗುವನ್ನು ಆತನಿಂದ ಪಡೆದು ರಕ್ಷಿಸಲಾಗಿದೆ. ಮಗುವಿಗೆ ಎರಡೂವರೆ ವರ್ಷ ಇರಬಹುದೆಂದು ಅಂದಾಜಿಸಲಾಗಿದೆ. ಮಕ್ಕಳ ರಕ್ಷಣಾ ಘಟಕರ ಪ್ರಕಾಶ್ ನಾಯ್ಕ್ ಮತ್ತು ಮನೋಜ್ ಇದ್ದರು. ಮಗುವಿನ ನಿಜವಾದ ಹೆತ್ತವರು ಯಾರು ಎಂಬುದು ತನಿಖೆಯಿಂದಷ್ಟೇ ತಿಳಿದುಬರಬೇಕಾಗಿದೆ.