ದಾವಣಗೆರೆ: ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಲು ಮಕ್ಕಳು ಭಯ ಬಿಟ್ಟು ಸಂಭ್ರಮದಿಂದ ಹಬ್ಬದಂತೆ ಆಚರಿಸಬೇಕಾಗಿದೆ. ಈ ಪ್ರೌಢ ಶಿಕ್ಷಣ ಹಂತ ಮಕ್ಕಳ ಜೀವನದ ಒಂದು ತಿರುವು. ವಿದ್ಯಾರ್ಥಿಗಳು ಯಾವುದೇ ಅಡ್ಡ ದಾರಿಗೆ ಹೋಗದೇ ಶಿಕ್ಷಣದ ಕಡೆಗೆ ಗುರಿ ಇಡಬೇಕಾದ ಅಗತ್ಯವಿದೆ. ಉತ್ತಮ ಫಲಿತಾಂಶದೊಂದಿಗೆ ವಿಶ್ವವ್ಯಾಪ್ತಿಯಾದ ಈ ಮೈಸೂರಿಗೆ ಒಳ್ಳೆಯ ಹೆಸರು ತರಬೇಕಾಗಿದೆ ಎಂದು ಮೈಸೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರಕಾಶ್ ಎಂ. ತಮ್ಮ ಅಂತರಾಳದ ಅಭಿಪ್ರಾಯ ವ್ಯಕ್ತಪಡಿಸಿದರು.
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಮತ್ತು ಮೈಸೂರಿನ ಹೊಟಗಳ್ಳಿ ಸರ್ಕಾರಿ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಪ್ರೌಢಶಾಲೆಯ ಶಾರದಾ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಉಚಿತ ಕಾರ್ಯಾಗಾರ ಸಮಾರಂಭವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೈಸೂರು ಜಿಲ್ಲೆಯ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ನಾಗರಾಜ್ ವಿ.ಬೈರಿಯವರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿ, ಕರ್ನಾಟಕ ಸರ್ಕಾರ, ಕನ್ನಡ ಸಂಸ್ಕೃತಿ ಇಲಾಖೆ, ಶಿಕ್ಷಣ ಇಲಾಖೆಗಳು ಮಾಡದಂತಹ ಶೈಕ್ಷಣಿಕ ಕಾಳಜಿಯ ಈ ಉಚಿತ ಕಾರ್ಯಾಗಾರ, ಪರೀಕ್ಷೆಯ ಫಲಿತಾಂಶದ ನಂತರ ಉತ್ತಮ ಫಲಿತಾಂಶ ಪಡೆದ ಮಕ್ಕಳಿಗೆ ಮದುವೆ ಸಂಭ್ರಮದಂತೆ ಸನ್ಮಾನಿಸಿ ಪುರಸ್ಕರಿಸುವ ಈ ವಿಜೃಂಭಣೆಯ ಸಮಾರಂಭ ಕಳೆದ 35 ವರ್ಷಗಳಿಂದ ನಡೆಸುತ್ತಿರುವ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.
ವಿದ್ಯಾರ್ಥಿನಿಯರಾದ ಕುಮಾರಿ ಪೂಜಾ ಮತ್ತು ತಂಡದವರಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಸಮಾರಂಭಕ್ಕೆ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಸಂಗೀತಾ ಪಿ.ನಾಡಿಗ್ ಸ್ವಾಗತಿಸಿ ಪ್ರಾಸ್ತಾವನೆಯಾಗಿ ಈ ಕಾರ್ಯಾಗಾರದ ಬಗ್ಗೆ ವಿವರ ತಿಳಿಸಿದರು.
ಕಲಾಕುಂಚ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಮಕ್ಕಳಿಗೆ ಪರೀಕ್ಷೆ ಎದುರಿಸುವ ಧೈರ್ಯ ತುಂಬಿ ಉಚಿತವಾಗಿ ಕಾರ್ಯಾಗಾರ ನಡೆಸಿ, ಮಾರ್ಗದರ್ಶನ ಮಾಡಿದರು. ಶಿಕ್ಷಣಾಧಿಕಾರಿಗಳ ಅನುಮತಿ ಪಡೆದು ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಮೈಸೂರು ಜಿಲ್ಲೆಯ ಲಯನ್ಸ್ ಕ್ಲಬ್ ಜಿಲ್ಲಾಧ್ಯಕ್ಷರಾದ ಎಂ.ಎನ್.ಬಾಲಕೃಷ್ಣರಾಜು, ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಸಮಿತಿ ಸದಸ್ಯರಾದ ಶಿಲ್ಪಾ ಉಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಕ್ಕಳಿಗೆ ಶುಭ ಹಾರೈಸಿದರು. ಈ ಶಿಕ್ಷಣ ಸಂಸ್ಥೆಯ ಸಹ ಶಿಕ್ಷಕರಾದ ರಂಗಸ್ವಾಮಿಯವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
ಮಕ್ಕಳು ಪರೀಕ್ಷೆ ಭಯ ಬಿಟ್ಟು ಸಂಭ್ರಮದಿಂದ ಹಬ್ಬದಂತೆ ಆಚರಿಸಿ-ಪ್ರಕಾಶ್ ಎಂ.
RELATED ARTICLES