Tuesday, January 14, 2025
Homeಮಂಗಳೂರುಬೋಳಾರ ಶಾಲೆಯಲ್ಲಿ ಮಕ್ಕಳ ಸಹಕಾರದಿಂದ ಕೃಷಿ ಚಟುವಟಿಕೆ: ಭತ್ತ ಕಟಾವು ಮತ್ತು ಅಕ್ಕಿ ಹಂಚಿಕೆ

ಬೋಳಾರ ಶಾಲೆಯಲ್ಲಿ ಮಕ್ಕಳ ಸಹಕಾರದಿಂದ ಕೃಷಿ ಚಟುವಟಿಕೆ: ಭತ್ತ ಕಟಾವು ಮತ್ತು ಅಕ್ಕಿ ಹಂಚಿಕೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೋಳಾರ ಇಲ್ಲಿ ಇದೇ ಸಪ್ಟೆಂಬರ್ 12ನೇ ತಾರೀಖಿನಂದು ಶಾಲಾ ಹಿಂಬಾಗದ ಜಾಗದಲ್ಲಿ 20*20 ಅಡಿಯ ಜಾಗದಲ್ಲಿ ಮಕ್ಕಳ ಸಹಕಾರದೊಂದಿಗೆ ಗದ್ದೆಯನ್ನು ನಿರ್ಮಿಸಿ ಕಜೆ ಜಯಭತ್ತದ ನೇಜಿಯನ್ನು ನೀಡಲಾಗಿತ್ತು. ಸುಮಾರು ಮೂರು ತಿಂಗಳು ಭತ್ತ ಸಂಪೂರ್ಣವಾಗಿ ಬೆಳೆದು ಕಂಗೊಳಿಸುತಿತ್ತು. ನೇಜಿ ನೆಡುವ ಸಮಯದಲ್ಲಿ ಆರು ಮತ್ತು ಏಳನೇ ತರಗತಿಯ 30 ಮಕ್ಕಳು ನೇಜಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಲ್ಲದೆ ಶಾಲೆಯ ನಾಲ್ಕು ಶಿಕ್ಷಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ನೇಗಿಡಲು ಸಹಕಾರ ನೀಡಿದ್ದರು. ಸುಮಾರು ಮೂರು ತಿಂಗಳ ಬಳಿಕ ಇಂದು ಬೆಳೆದು ನಿಂತ ಭತ್ತದ ಪೈರನ್ನು ಕಟಾವ್ ಮಾಡಲಾಯಿತು. ಇಂದು ಮತ್ತೆ ಕಟಾವ್ ಮಾಡಲು ಏಳನೇ ತರಗತಿಯ 11 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮತ್ತು ನಾಲ್ಕು ಮಂದಿ ಶಿಕ್ಷಕರು ಕೂಡ ಭಾಗವಹಿಸಿದ್ದರು.

ಭತ್ತ ಕಟಾವು ಮಾಡುವ ಸಂದರ್ಭದಲ್ಲಿ ಭತ್ತದ ಒಣಗಿದ ಫೈರು ತುರಿಸುವುದರಿಂದ ಸಣ್ಣ ಮಕ್ಕಳನ್ನು ಭತ್ತದ ಪೈರು ಕಟಾವ್ ಮಾಡುವಲ್ಲಿ ಬಿಡಲಿಲ್ಲ. ಭತ್ತ ಕಟಾವ್ ಮಾಡುವ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣ ಅಧಿಕಾರಿಯವರಾದ ಶ್ರೀಯುತ ಎಚ್ಆರ್ ಈಶ್ವರ್ ಅವರು ಮಕ್ಕಳ ಕಾರ್ಯವನ್ನು ನೋಡಿ ಅಭಿನಂದಿಸಿ ಶುಭ ಹಾರೈಸಿದರು. ಬೆಳಗಿನಿಂದ ಸಂಜೆಯವರೆಗೆ ಭತ್ತದ ಪೈರನ್ನು ಒಣಗಿಸಿ ಸಂಜೆ ಮೂರು ಗಂಟೆಯಿಂದ ಆರು ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳನ್ನು ಬಳಸಿಕೊಂಡು ಭತ್ತದ ಪೈರಿನಿಂದ ತೆನೆಯನ್ನು ಬಿಡಿಸುವ ಕಾರ್ಯ ಮಾಡಲಾಯಿತು.

ನಾಲ್ಕರಿಂದ ಐದನೇ ತರಗತಿಯವರೆಗಿನ ಹೆಚ್ಚಿನ ಎಲ್ಲಾ ವಿದ್ಯಾರ್ಥಿಗಳು ಭತ್ತದ ಪೈರಿನಿಂದ ಕಾಳನ್ನು ಬೇರ್ಪಡಿಸಲು ಪಡಿಮಂಚಕ್ಕೆ ಬಡಿಯುವ ಕೆಲಸದಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದರು. ಸಂಜೆ ಬಡಿಯುವಿಕೆಯ ಕೆಲಸ ಮಾಡುವಾಗ ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಸುಷ್ಮಾ ಮೇಡಂರವರು ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು. ಜೊತೆಗೆ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬಡಿಯುವಿಕೆ ಮತ್ತು ತೂರುವಿಕೆಯ ಕೆಲಸದಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ನಮ್ಮ ಶಾಲಾ ವಿದ್ಯಾರ್ಥಿಗಳು ಎಲ್ಲಾ ಚಟುವಟಿಕೆಗಳನ್ನು ಅತ್ಯಂತ ಆಸಕ್ತಿಯಿಂದ ಮಾಡಿ ಕೃಷಿಯ ಪ್ರತಿಯೊಂದು ಹಂತವನ್ನು ಸ್ವತಹ ಮಾಡುವುದರ ಮೂಲಕ ತಿಳಿದುಕೊಂಡರು. ಇವತ್ತು ಸುಮಾರು ಎಂಟು ಕೆಜಿ ಭತ್ತವನ್ನು ಪಡೆಯಲಾಯಿತು. ಕಳೆದ ವರ್ಷ 7×7 ಅಡಿ ಜಾಗದಲ್ಲಿ ಬತ್ತವನ್ನು ಬೆಳೆದು 2 ಕೆಜಿ ಭತ್ತವನ್ನು ಪಡೆಯಲಾಗಿತ್ತು. ಅದರಿಂದ ಸುಮಾರು ಒಂದುವರೆ ಕೆಜಿಯಷ್ಟು ಅಕ್ಕಿಯನ್ನು ಪಡೆಯಲಾಗಿತ್ತು. ಈ ಒಂದುವರೆ ಕೆಜಿ ಅಕ್ಕಿಯ ಜೊತೆಗೆ ನಮ್ಮ ಮನೆಯಲ್ಲಿ ಬೆಳೆಸಿದ ಅಕ್ಕಿಯನ್ನು ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರಿಗೂ ಒಂದೊಂದು ಕೆಜಿಯಂತೆ ಎಲ್ಲಾ ವಿದ್ಯಾರ್ಥಿಗಳಿಗೂ ನೀಡಿರುತ್ತೇನೆ.

ಈ ವರ್ಷದ ಭತ್ತದಿಂದ ಅಕ್ಕಿಯನ್ನು ಮಾಡಿ ಎಲ್ಲಾ ಮಕ್ಕಳಿಗೆ ಹಂಚಲಿದ್ದೇನೆ. ಅದೇ ಗದ್ದೆಯಲ್ಲಿ ತರಕಾರಿ ಮತ್ತು ಗೆಣಸನ್ನು ಬೆಳೆಸುವ ಯೋಚನೆ ಇದೆ. ಅಲ್ಲದೆ ಜೋಳ ಮತ್ತು ರಾಗಿಯನ್ನು ಕೂಡ ಬೆಳೆಸಬೇಕೆಂದಿದ್ದೇವೆ. ನಮ್ಮ ಈ ಎಲ್ಲಾ ಕೃಷಿ ಚಟುವಟಿಕೆಗಳಿಗೆ ಸಹಕರಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಪೋಷಕರಿಗೆ ನನಗೆ ಸಹಕಾರ ನೀಡಿದ ಎಲ್ಲರಿಗೂ ಅಭಾರಿಯಾಗಿದ್ದೇನೆ.

RELATED ARTICLES
- Advertisment -
Google search engine

Most Popular