ಅಂಗನವಾಡಿ ಶಿಕ್ಷಕಿಯರ ಸೇವೆಯಿಂದ ಮಕ್ಕಳ ಅಭ್ಯುದಯ
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ರಶ್ಮಿ ಎಸ್.ಆರ್.
ಮಂಗಳೂರು : ಎಳೆಯ ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ ನೀಡುತ್ತಿರುವ ಅಂಗನವಾಡಿ ಶಿಕ್ಷಕಿಯರ ಸೇವೆ ಮಕ್ಕಳ ಅಭ್ಯುದಯಕ್ಕೆ ಕಾರಣವಾಗಿದೆ. ಇಂತಹ ಅಂಗನವಾಡಿಗಳ ಅಭಿವೃದ್ಧಿಗೆ ಸಾರ್ವಜನಿಕ ಸಹಭಾಗಿತ್ವವೂ ಅಗತ್ಯ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ರಶ್ಮಿ ಎಸ್.ಆರ್.ಹೇಳಿದರು.
ನಗರದ ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾದ ಮಕ್ಕಳ ದಿನಾಚರಣೆ ಹಾಗೂ ಪುಟಾಣಿ ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ ಮಕ್ಕಳ ದಿನಾಚರಣೆಯಂದು ಎಲ್ಲ ಮಕ್ಕಳು ಸಂಭ್ರಮಿಸುವಂತಾಗಬೇಕು . ಯಾವ ಮಗು ಕೂಡಾ ಶಿಕ್ಷಣದಿಂದ ವಂಚಿತರಾಗದಂತೆ ಕಾಳಜಿ ವಹಿಸುವುದು ಮುಖ್ಯ ಎಂದ್ಟಜಿ.
ಮುಖ್ಯ ಅತಿಥಿಯಾಗಿದ್ದ ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ ‘ ಮಕ್ಕಳಲ್ಲಿ ದೇವರನ್ನು ಕಾಣುವ ಸಂಸ್ಕಾರ ನಮ್ಮದು. ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿರುವ ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದ ಚಟುವಟಿಕೆ ಉತ್ತಮವಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಕಾಮತ್ ಕ್ಯಾಟರರ್ಸ್ ಮಾಲೀಕ ಸುಧಾಕರ ಕಾಮತ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮುಖ್ಯ ಅತಿಥಿಗಳಾಗಿದ್ದರು. ಹಿರಿಯ ಪತ್ರಕರ್ತರಾದ ಕೇಶವ ಕುಂದರ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್.ಬಿ.ಎನ್., ಪತ್ರಕರ್ತರಾದ ಪ್ರೀತಂ ರೈ, ಲಲಿತಾಶ್ರೀ , ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದ ಶಿಕ್ಷಕಿ ನಂದಾ, ಸಹಾಯಕಿ ಲಕ್ಷ್ಮಿ,ಆಶಾ ಕಾರ್ಯ ಕರ್ತೆ ಪ್ರಭಾ ಉಪಸ್ಥಿತರಿದ್ದರು.
ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ನಿರಂತರ ಶ್ರಮವಹಿಸಿದ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರು ಚಾಣಕ್ಯ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಹಿನ್ನೆಲೆಯಲ್ಲಿ ಅವರನ್ನು ಅಂಗನವಾಡಿ ಕೇಂದ್ರದ ಪರವಾಗಿ ಇದೇ ಸಂದರ್ಭ ಸನ್ಮಾನಿಸಲಾಯಿತು.