Friday, March 21, 2025
Homeಕಾಸರಗೋಡುಕೃಷ್ಣ ಪೈಗಳ ಮನೆಯ ಅಂಗಳದಲ್ಲಿ ಚಿನ್ನಾರಿಗಳು ಕವಿಗಳಾದರು

ಕೃಷ್ಣ ಪೈಗಳ ಮನೆಯ ಅಂಗಳದಲ್ಲಿ ಚಿನ್ನಾರಿಗಳು ಕವಿಗಳಾದರು

ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಭಾನುವಾರ (ಫೆ.9)ದಂದು ಬದಿಯಡ್ಕದ ಗಣೇಶ ಪೈಗಳ ಮನೆಯಲ್ಲಿ ದಿವಂಗತ ಬಿ ಕೃಷ್ಣ ಪೈ ಬದಿಯಡ್ಕ ಅವರ ಬದುಕು- ಬರಹದ ಮೆಲುಕು ಕಾರ್ಯಕ್ರಮದಲ್ಲಿ ನಡೆದ ಚುಟುಕು ಕವಿಗೋಷ್ಠಿಯಲ್ಲಿ ಸುಮಾರು 13 ಮಂದಿ ಕವಿಗಳು ಭಾಗವಹಿಸಿದ್ದರು. ಹಿರಿಯ ಮತ್ತು ಕಿರಿಯರು ಸೇರಿದ ಕವಿಗೋಷ್ಠಿಯು ಕಾವ್ಯಾಸಕ್ತರಿಗೆ ಮುದ ನೀಡಿತ್ತು. ಶಾರದಾ ಮೊಳೆಯಾರ್ ಎಡನೀರು ಅವರು ಫ್ಯಾಷನ್ ತುಂಡುಡುಗೆ ಹಾಗೂ ಕೃಷಿಕರ .ಹರಕು ಬಟ್ಟೆಯ ಭಿನ್ನತೆಯಲ್ಲಿನ ವ್ಯತ್ಯಸ್ತ ಮನೋಭಾವವನ್ನು ಚುಟುಕದ ಮೂಲಕ ತಿಳಿಸಿದರು. ದು:ಖದಲ್ಲೂ ಆತ್ಮಾಭಿಮಾನ ಬಿಡಬಾರದು ಎಂಬ ಸಂದೇಶ ನೀಡುವ ಚುಟುಕು, ಸಂಕಲನ, ವ್ಯವಕಲನದ ಆಟದ ರಸದೌತಣ ನೀಡುವ ಗಣಿತ ಎಂಬ ಚುಟುಕು ಆಕರ್ಷಕವಾಗಿತ್ತು. ಕೆ. ನರಸಿಂಹ ಭಟ್ ಎತಡ್ಕ ಅವರ ಹಕ್ಕುಗಳಿವೆಯೆಂದು ಸೊಕ್ಕು ತೋರಬಾರದು, ಎಲ್ಲರೊಡನೆ ಸವಿನಯದಿಂದ ಬದುಕಬೇಕು ಎಂಬ ಚುಟುಕ, ಕಾಡಾನೆಗಳ ಹಾವಳಿಯಿಂದ ಕೃಷಿ ಕ್ಷೇತ್ರದ ಸಂಕಷ್ಟವನ್ನು ಬಣ್ಣಿಸುವ ಚುಟುಕ, ವ್ಯಕ್ತಿಗತ ಕರ್ತವ್ಯವನ್ನು ನೆನಪಿಸುವ ಚುಟುಕಗಳು ಉತ್ತಮವಾಗಿತ್ತು. ರಾಧಾಕೃಷ್ಣ ಭಟ್ ಕುರುಮುಜ್ಜಿ ಅವರ ಮರೆಯಾದವರು, ಮರೆಯಲಾಗದವರು ಎಂಬ ಚುಟುಕದಲ್ಲಿ ಕವಿ ಕೃಷ್ಣ ಪೈಗಳ ಸಾಧನೆಗಳು ಅನಾವರಣಗೊಂಡುವು. ಗಾಯತ್ರಿ ಪಳ್ಳತ್ತಡ್ಕ ಅವರ ಕನ್ನಡ ಕವಿಗಳನ್ನು ಧ್ರುವತಾರೆಗಳೆಂದು ಬಣ್ಣಿಸಿದ ರೀತಿ, ಕಲಾವಿದರ ಬೀಡು ಎಂಬ ಪರಂಪರೆಯ ಪ್ರಸ್ತುತಿ ಚೆನ್ನಾಗಿತ್ತು. ತಾಯಿ ಎಂಬ ಚುಟುಕವೂ ಗಮನ ರಸೆಳೆಯಿತು. ಶಶಿಕಲಾ ಟೀಚರ್ ಕುಂಬಳೆ ಅವರ ಪುಣ್ಯ ತ್ರಿವೇಣಿ ಸಂಗಮ ಕುಂಭಮೇಳದ ಕುರಿತ ರಚನೆ, ದ್ವಿರುಚಿ, ಬಜೆಟ್ ಚುಟುಕಗಳು ಆಕರ್ಷಕವಾಗಿದ್ಡುವು. ಶಾರದಾ ಭಟ್ ಕಾಡಮನೆ ಅವರ ಸಪ್ತಪದಿ ತುಳಿಯುವ ವಧುವಿಗೆ ಕಿವಿಮಾತು, ತಪ್ಪು ಮಾಡಿದ ಮೇಲೆ ವಾದ ಮಾಡಬಾರದು ಎಂಬ ಸಂದೇಶ, ನರನು ಎತ್ತರಕ್ಕೆ ಬೆಳೆದು ಅಮರನಾಗಬೇಕೆನ್ನುವ ಸ್ಮರಣಾಂಜಲಿ ಎಂಬ ಚುಟುಕು
ಗಮನ ಸೆಳೆಯಿತು. ಗಣೇಶ ಪೈ ಬದಿಯಡ್ಕ ಅವರ ಮಳೆ ಎಂಬ ಹಾಸ್ಯ ಚುಟುಕು, ಕೃಷ್ಣ ಪೈಗಳನ್ನು ನೆನಪಿಸಿತು. ಸನ್ಮಾನದಿಂದ ಸಾಧಕನಿಗೆ ಧನ್ಯತಾ ಭಾವ ಮೂಡುವುದೆಂಬ ಚುಟುಕು, ಜೀವನವು ಹಟವಾಗಬಾರದು, ಸಂತಸದ ಪುಟವಾಗಬೇಕು ಎಂಬ ಆಶಯ ಮನೋಜ್ಞವಾಗಿತ್ತು. ಅವನಿ ಕರಿಂಬಿಲ ಬರೆದ ಭೂಮಿ ಎಂಬ ಚುಟುಕಿನಲ್ಲಿ ಕೃಷಿ ಜೀವನವು ಅನಾವರಣಗೊಂಡಿತು. ಜೀವನ ಹಾಗೂ ಸೈನಿಕ ರಚನೆಗಳೂ ಉತ್ತಮವಾಗಿತ್ತು. ಹರ್ಷಿತಾ ಪಳ್ಳಕ್ಕಾನ ಅವರ ನಿನ್ನೆಯ ಇಂದು ನಾಳೆಗೆ ಮುನ್ನುಡಿ ಎಂಬ ಉಲ್ಲೇಖ, ಮುಂಬರುವ ದಿನಗಳು ಬಾಳಿನ ಹೊಸ ಪುಟಗಳು ಎಂಬ ಕಲ್ಪನೆ, ಈ ದಿನವು ಚಿನ್ನಾರಿಗಳು ಕವಿಗಳಾದ ದಿನ ಎಂಬ ಉಲ್ಲೇಖವು ಇಡೀ ಸ್ಮರಣಾಂಜಲಿ ಕಾರ್ಯಕ್ರಮಕ್ಕೆ ಹೊಳಪು ನೀಡಿತ್ತು. ಶಿಕ್ಷಕ ಗಣೇಶ ಆಚಾರ್ಯ ಅವರ ರಚನೆಯಲ್ಲಿ ಸ್ವಾರ್ಥ ಪರವಾದದ್ದು ಜೀವನವಲ್ಲ, ನಿಸ್ವಾರ್ಥ ಜೀವನವು ಸುಲಭವಲ್ಲ ಎಂಬ ಮಾತು ಆಕರ್ಷಕವಾಗಿತ್ತು. ಜಂಗಮವಾಣಿ ಚುಟುಕ, ಸೊನ್ನೆ ಎಂಬ ಹಾಸ್ಯ ಚುಟುಕ ನಗಿಸಿತು. ಶಾತೋದರಿ ಅವರ ದಿಗಂತ ಚುಟುಕಿನಲ್ಲಿ ಪ್ರಕೃತಿಯ ವಿಸ್ಮಯದ ಸಿದ್ಧಾಂತದ ಸೋಜಿಗ ವ್ಯಕ್ತವಾಗಿತ್ತು. ಬಾನೆತ್ತರಕ್ಕೆ ಚುಂಬಿಸುವ ಕನಸನ್ನು ನನಸು ಮಾಡುವುದೇ ಮನಸು ಎಂಬ ಚುಟುಕ ಹಾಗೂ ಮುಂಬಾಗಿಲು ರಚನೆಗಳು ಮನಮೋಹಕವಾಗಿದ್ದುವು. ಸಮನ್ವಿ ಬರೆದ ಬೆಳಗುವ ಸೂರ್ಯ ಸಂಜೆ ಮನೆಗೆ ಹೊರಟಾಗ ಮಕ್ಕಳೂ ಕೂಡಾ ಮನೆಯ ಕಡೆ ಹೆಜ್ಜೆ ಹಾಕಿದರು ಎಂಬ ಕಲ್ಪನೆ ಸುಂದರವಾಗಿತ್ತು. ಅಮ್ಮನ ಬಗ್ಗೆ ಇರುವ ಪೂಜನೀಯ ಭಾವ, ಪ್ರೀತಿಯು ಅಮ್ಮ ಎಂಬ ಚುಟುಕದಲ್ಲಿ ವ್ಯಕ್ತವಾಗಿದೆ. ಅಪ್ಪನ ತ್ಯಾಗಮಯ ಜೀವನವನ್ನು ಕೂಡಾ ಅವರು ಚುಟುಕಿನ ಮೂಲಕ ಅನಾವರಣ ಮಾಡಿದ್ದಾರೆ. ಅವನಿ ಅವರ ಕಷ್ಟ- ಸುಖಗಳ ಆಗರವಾದ ಬದುಕಿನಲ್ಲಿ ದುಮ್ಮಿಕ್ಕಿ ಬರುವ ಆಸೆಗಳನ್ನು ನಿಯಂತ್ರಿಸಬೇಕು ಎಂಬ ಸಂದೇಶ ನೀತಿಪಾಠದಂತಿತ್ತು. ನಿದ್ದೆಗೆಡಿಸುವ ಮೊಬೈಲ್ ವ್ಯವಸ್ಥೆಯನ್ನು ನಿಯಂತ್ರಣದಲ್ಲಿ ಬಳಸಬೇಕು. ತಪ್ಪಿದಲ್ಲಿ ಬದುಕಿಗೆ ಬರೆಯಾಗಬಹುದು ಎಂಬ ಕಳಕಳಿಯು ಅವರ ರಚನೆಯಲ್ಲಿತ್ತು. ಒಟ್ಟಿನಲ್ಲಿ ಕವಿಗೋಷ್ಠಿಯು ಬದಿಯಡ್ಕದಲ್ಲಿ ಈಗಲೂ ಕೂಡಾ ಸಾಹಿತ್ಯದ ಬೇರು ಗಟ್ಟಿಯಾಗಿದೆ ಎಂದು ತೋರಿಸಿಕೊಟ್ಟಿತು.

– ವಿರಾಜ್ ಅಡೂರು

RELATED ARTICLES
- Advertisment -
Google search engine

Most Popular