Sunday, January 19, 2025
Homeರಾಜಕೀಯಗೋವಿಂದ ಕಾರಜೋಳ ಸಚಿವರಾಗಿದ್ದಾಗ ಚಿತ್ರದುರ್ಗದ ನೀರಾವರಿ, ಶಿಕ್ಷಣಕ್ಕೆ ಆದ್ಯತೆ: ಜಿಲ್ಲೆಯೊಂದಿಗೆ ಬಿಜೆಪಿ ಅಭ್ಯರ್ಥಿಗೆ ಕರುಳಬಳ್ಳಿ ಸಂಬಂಧ...

ಗೋವಿಂದ ಕಾರಜೋಳ ಸಚಿವರಾಗಿದ್ದಾಗ ಚಿತ್ರದುರ್ಗದ ನೀರಾವರಿ, ಶಿಕ್ಷಣಕ್ಕೆ ಆದ್ಯತೆ: ಜಿಲ್ಲೆಯೊಂದಿಗೆ ಬಿಜೆಪಿ ಅಭ್ಯರ್ಥಿಗೆ ಕರುಳಬಳ್ಳಿ ಸಂಬಂಧ – ಬಿಜೆಪಿ ಜಿಲ್ಲಾಧ್ಯಕ್ಷ ಎ ಮಯರಳಿಧರ

ಚಿತ್ರದುರ್ಗ: ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ಚಿತ್ರದುರ್ಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಸುಮಾರು 600 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಯೋಜನೆಗಳನ್ನು ಮಂಜೂರು ಮಾಡಿಸಿದ್ದಾರೆ. ಜಿಲ್ಲೆಯಲ್ಲಿ ಶಿಕ್ಷಣ, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ ಎಂದು ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷ ಎ ಮುರಳಿಧರ ತಿಳಿಸಿದ್ದಾರೆ. ಇಂತಹ ಅಭಿವೃದ್ಧಿಪರ ಹಾಗು ಸಾಮಾಜಿಕ ಕಳಕಳಿಯ ನಾಯಕರನ್ನು ಹೊರಗಿನವರು ಎಂದು ಟೀಕಿಸುವುದು ಸರಿಯಲ್ಲ. ಗೋವಿಂದ ಕಾರಜೋಳ ಅವರು ಜಲ ಸಂಪನ್ಮೂಲ ಸಚಿವರಾಗಿದ್ದಾಗ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಆದ್ಯತೆ ಕೊಟ್ಟಿದ್ದರು. ವಿಶೇಷವಾಗಿ ಭದ್ರಾ ಮೇಲ್ದಂಡೆ ಯೋಜನೆ ಮಂಜೂರಾತಿಗಾಗಿ ಶ್ರಮಿಸಿದ್ದರು. ಅದಕ್ಕಾಗಿ ಜಲಸಂಪನ್ಮೂಲ ಸಚಿವರಾಗಿದ್ದಾಗ ಅನೇಕ ಸಲ ದಿಲ್ಲಿಗೆ ತೆರಳಿ ಕೇಂದ್ರ ಸರಕಾರದ ಗಮನ ಸೆಳೆದಿದ್ದಾರೆ. ಇದೇ ಕಾರಣಕ್ಕಾಗಿ ಕಾರಜೋಳರ ಅಭಿವೃದ್ಧಿ ಪರ, ಜನಪರ ಕಾಳಜಿಯನ್ನು ಗಮನಿಸಿ ಅವರನ್ನು ಬೆಂಬಲಿಸುವುದಾಗಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ ಪ್ರಕಟಿಸಿರುವುದು ಉತ್ತಮ ಬೆಳವಣಿಗೆ ಎಂದರು. ಗೋವಿಂದ ಕಾರಜೋಳ ಸಚಿವರಾಗಿದ್ದಾಗ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಿದ್ದು, ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ವಸತಿ ಶಾಲೆಗಳಿಗೆ 358.33 ಕೋಟಿ ರೂ ಮಂಜೂರು ಮಾಡಿಸಿದ್ದಾರೆ. ಎಸ್.ಸಿ/ಎಸ್.ಟಿ ವಸತಿ ನಿಲಯಗಳಿಗಾಗಿ 102.75 ಕೋಟಿ ರೂ, ಚಿತ್ರದುರ್ಗದಲ್ಲಿ ಎಸ್.ಸಿ/ಎಸ್‌.ಟಿ ಸಮುದಾಯ ಭವನ ನಿರ್ಮಾಣಕ್ಕೆ 33.70 ಕೋಟಿ ರೂ, ದುರ್ಗದ ಪ್ರಥಮ ದರ್ಜೆ ಕಾಲೇಜಿಗೆ 25 ಕೋಟಿ ರೂ., ಮೊಳಕಾಲ್ಮೂರು ವಿಭಾಗದಲ್ಲಿ 3 ವಸತಿ ಶಾಲೆಗಳಿಗೆ 53.10 ಕೋಟಿ ರೂ, ಮೆಟ್ರಿಕ್‌ ನಂತರದ ವಸತಿ ನಿಲಯಗಳಿಗೆ 3.8 ಕೋಟಿ ರೂ, ಹಿರಿಯೂರು ತಾಲೂಕಿನ ಯಲ್ಲದ ಕೆರೆಯಲ್ಲಿ ಮೋರಾರ್ಜಿ ವಸತಿ ಶಾಲೆಗೆ 16.70 ಕೋಟಿ ರೂ, ಪಾವಗಡ ಸುತ್ತಮುತ್ತಲಿನ ವಸತಿ ಶಾಲೆಗಳಿಗಾಗಿ 65.09 ಕೋಟಿ ರೂ, ಪಾವಗಡ ನಗರದಲ್ಲಿ ಆರು ಮೆಟ್ರಿಕ್‌ ಪೂರ್ವ, ನಂತರದ ವಸತಿ ನಿಲಯಗಳ ನಿರ್ಮಾಣಕ್ಕಾಗಿ 120.45 ಕೋಟಿ ರೂ, ಜಿಲ್ಲೆಯ ಮೊರಾರ್ಜಿ ಮತ್ತು ಇಂದಿರಾ ಗಾಂಧಿ ವಸತಿ ಶಾಲೆಗಳಿಗಾಗಿ 41.40 ಕೋಟಿ ರೂ, ಚೆಳ್ಳಕೆರೆ ಮತ್ತಿತರ ಕಡೆಗಳಲ್ಲಿ ವಸತಿ ಶಾಲೆಗಳಿಗಾಗಿ 77.40 ಕೋಟಿ ರೂ. ಮಂಜೂರು ಮಾಡಿಸಿರುವುದು ಕಾರಜೋಳಗಿರುವ ಜಿಲ್ಲೆಯ ಜನಪರ, ಸಾಮಾಜಿಕ, ಶೈಕ್ಷಣಿಕ ಹಾಗೂ ರೈತಪರ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಚಿತ್ರದುರ್ಗ ಬಗ್ಗೆ ಅವರ ಸಂಬಂಧದ ಆಳವಾದ ಪರಿಚಯ ನಮಗೆಲ್ಲರಿಗೂ ಅರಿವಾಗುತ್ತದೆ. ಗೋವಿಂದ ಕಾರಜೋಳ ಅವರು ಚಿತ್ರದುರ್ಗದ ಅಸ್ಮಿತೆಯಾಗಿದ್ದ ನಿಷ್ಕಳಂಕ ರಾಜಕಾರಣಿಗಳಾದ ನಿಜಲಿಂಗಪ್ಪ, ಕೆ.ಎಚ್.‌ ರಂಗನಾಥ್‌, ಡಿ. ಮಂಜುನಾಥ್‌ ಮತ್ತಿತರ ನಾಯಕರ ಹಾಗೂ ಹಿರಿಯರ ಪರಂಪರೆಯನ್ನು ಎತ್ತಿ ಹಿಡಿಯಲಿದ್ದಾರೆ ಎಂಬುದು ಅವರ ವ್ಯಕ್ತಿತ್ವದಿಂದಲೇ ಗೊತ್ತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭದ್ರಾಗೆ ರಾಷ್ಟ್ರೀಯ ಯೋಜನೆ ಮಾನ್ಯತೆ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಿಸುವಲ್ಲಿ ಗೋವಿಂದ ಕಾರಜೋಳರ ಪಾತ್ರ ಅಪಾರ. ಜೊತೆಗೆ ಅವಶ್ಯವಿರುವ ಎಲ್ಲಾ ಅನುಮೋದನೆಗಳನ್ನು ಕೇಂದ್ರ ಜಲ ಆಯೋಗದಿಂದ ಪಡೆಯುವಲ್ಲಿ ಅವರ ಪರಿಶ್ರಮ ಹೆಚ್ಚಿದೆ. ಶಿರಾ ಮತ್ತು ಹಿರಿಯೂರು ತಾಲೂಕಿನ 65 ಕೆರೆಗಳನ್ನು ತುಂಬಿಸುವ ಯೋಜನೆ ಅನುಷ್ಠಾನಗೊಳಿಸಿ ಜನ- ಜಾನುವಾರುಗಳ ನೀರಡಿಕೆಯನ್ನು ತಣಿಸಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಕಿರು ಕಾಲುವೆ ನಿರ್ಮಿಸಲು 1682 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಮಂಜೂರಾತಿ ಕೊಡಿಸಿದ್ದಾರೆ. ಈ ಕಾಮಗಾರಿಗಳು ಪ್ರಗತಿಯಲ್ಲಿವೆ. ಸೂಕ್ಷ್ಮ ನೀರಾವರಿ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಯಡಿ 40749 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರು ಕಲ್ಪಿಸಲು.1849 ಕೋಟಿ ರೂ. ಕಾಮಗಾರಿಗಳಿಗೆ ಅನುಮೋದನೆ ಕೊಡಿಸಿದ್ದಾರೆ. ಹೊಳಲ್ಕರೆ ತಾಲೂಕಿನ ಕೆರೆಗಳನ್ನು ತುಂಬಿಸಲು ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಕೆರೆಗಳನ್ನು ತುಂಬಿಸುವ 242 ಕೋಟಿ ರೂ. ಫೀಡರ್ ಪೈಪ್‍ಲೈನ್ ಕಾಮಗಾರಿಗಳಿಗೆ ಮಂಜೂರಾತಿ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ಫೀಡರ್ ಕಾಲುವೆಗಳನ್ನು ನಿರ್ಮಿಸಲು ರೂ.711 ಕೋಟಿಗಳಿಗೆ ಮಂಜೂರಾತಿ, ಪಾವಗಡ ತಾಲೂಕಿನ ಕೆರೆಗಳನ್ನು ತುಂಬಿಸಲು ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಫೀಡರ್ ಕಾಲುವೆಗಳನ್ನು ನಿರ್ಮಿಸಲು 656 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಮಂಜೂರಾತಿ ನೀಡಿದ್ದಾರೆ. ಶಿರಾ ತಾಲ್ಲುಕಿನ ಕೆರೆಗಳನ್ನು ತುಂಬಿಸಲು ತುಮಕೂರು ಶಾಖಾ ಕಾಲುವೆಯ ಫೀಡರ್ ಚಾನಲ್‍ಗಳನ್ನು ನಿರ್ಮಿಸಲು 6000 ಕೋಟಿ ರೂ.ವೆಚ್ಚದ ಕಾಮಗಾರಿಗಳಿಗೆ ಮಂಜೂರಾತಿ ನೀಡಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಹತ್ತರ ಕಾಮಗಾರಿಗಳಿಗೆ ಸಾವಿರಾರು ಕೋಟಿ ರೂ. ಅನುಮೋದನೆ ಕೊಡಿಸಿದ್ದರ ಫಲವಾಗಿ ಕಾಮಗಾರಿ ಚಾಲ್ತಿಯಲ್ಲಿವೆ ಎಂದರು.

ಚಿತ್ರದುರ್ಗ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿದಿರುವ ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಸರಳ, ಸಜ್ಜನಿಕೆ ಹಾಗೂ ಜನಪರ ಕಾಳಜಿಯುಳ್ಳ ಗೋವಿಂದ ಕಾರಜೋಳ ಅವರನ್ನು ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ಒಗ್ಗಟ್ಟು ಪ್ರದರ್ಶನ ಮಾಡಿ ಭರ್ಜರಿ ಬಹುಮತಗಳ ಅಂತರದಿಂದ ಜಯಶೀಲರನ್ನಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯ. ಗೋವಿಂದ ಕಾರಜೋಳರನ್ನು ನಾವು ನೀವೆಲ್ಲ ಬೆಂಬಲಿಸಿ ಅವರನ್ನು ಸಂಸದರನ್ನಾಗಿಸಿ ಆರಿಸಿ ಕಳಿಸೋಣ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular