ಗೋಕಾಕ್: ಶಾಲಾ ಬ್ಯಾಗ್ ತಂದು ಕೊಡಲು ನಿರಾಕರಿಸಿದ ವಿದ್ಯಾರ್ಥಿಯೊಬ್ಬನಿಗೆ ಆತನ ಮೂವರು ಸಹಪಾಠಿಗಳು ಚಾಕುವಿನಿಂದ ಇರಿದ ಘಟನೆ ಗೋಕಾಕ್ ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಗಾಯಾಳುವನ್ನು 10ನೇ ತರಗತಿ ವಿದ್ಯಾರ್ಥಿ ಪ್ರದೀಪ ಬಂಡಿವಡ್ಡರ (15) ಎಂದು ಗುರುತಿಸಲಾಗಿದೆ. ಶಾಲೆ ಮುಗಿದ ಬಳಿಕ ನಗರದ ವಾಲ್ಮೀಕಿ ಮೈದಾನಕ್ಕೆ ಬಂದಿದ್ದ 10ನೇ ತರಗತಿ ವಿದ್ಯಾರ್ಥಿಗಳಾದ ರವಿ ಚಿನ್ನವ್ವ, ಅಶೋಕ್ ಕಂಕಣವಾಡಿ, ಸಿದ್ದಾರ್ಥ ಮಟ್ಟಿಕೊಪ್ಪ ಅವರು ಸಹಪಾಠಿ ಪ್ರದೀಪ್ ಬಂಡಿವಡ್ಡರಗೆ ತರಗತಿಯಲ್ಲಿದ್ದ ಬ್ಯಾಗ್ ತರುವಂತೆ ತಿಳಿಸಿದ್ದಾರೆ. ಇದಕ್ಕೆ ಪ್ರದೀಪ್ ನಿರಾಕರಿಸಿದ್ದು, ನಾಲ್ವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮೂವರು ಪ್ರದೀಪ್ ಕುತ್ತಿಗೆ, ಕೈ ಮತ್ತು ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಪ್ರದೀಪ್‌ನನ್ನು ಸ್ಥಳೀಯ ಶಿಕ್ಷಕರು ಗೋಕಾಕ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಗರ ಪೊಲೀಸರು ಆಸ್ಪತ್ರೆಗೆ ದೌಡಾಯಿಸಿ ಹಲ್ಲೆಗೊಳಗಾದವನಿಂದ ಮಾಹಿತಿ ಕಲೆ ಹಾಕಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ಇದೀಗ ಬಲೆ ಬೀಸಿದ್ದು, ಈ ಘಟನೆ ಸಂಬಂಧ ಗೋಕಾಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.