ಹೈದರಾಬಾದ್: ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಬಂದಿದ್ದ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಅಧಿಕಾರಿಗಳ ಯಡವಟ್ಟಿನಿಂದಾಗಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಧುರನಗರ ಬಳಿ ಬುಡಮೇರೂ ನದಿ ಬಳಿ ಈ ಘಟನೆ ಇಂದು ನಡೆದಿದೆ. ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಮತ್ತು ಅವರ ತಂಡವು ರೈಲ್ವೇ ಹಳಿಯೊಂದರ ಕೆಳಗೆ ಜಲಾವೃತಗೊಂಡಿರುವ ನದಿ ನೀರಿನ್ನು ವೀಕ್ಷಿಸಲು ಹೋಗುತ್ತಿತ್ತು. ಈ ವೇಳೆ ಚಂದ್ರಬಾಬು ನಾಯ್ಡು ಅವರು ರೈಲ್ವೇ ಹಳಿ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಏಕಾಏಕಿ ಟ್ರೈನ್ ಬಂದಿದೆ.
ತಕ್ಷಣವೇ ಆಲರ್ಟ್ ಆದ ಸಿಎಂ ಭದ್ರತಾ ಸಿಬ್ಬಂದಿ ಅವರನ್ನು ಹಳಿಯ ಪಕ್ಕಕ್ಕೆ ನಿಲ್ಲಿಸಿದ್ದಾರೆ. ಸಿಎಂ ಅವರನ್ನು ಕಿರಿದಾದ ಜಾಗದಲ್ಲಿ ನಿಲ್ಲಿಸಿ ರಕ್ಷಣೆ ಮಾಡಿದ್ದಾರೆ. ಆ ಮೂಲಕ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಅವರ ತಂಡವು ಕೂದಲೆಳೆ ಅಂತರದಿಂದ ಪಾರಾಗಿದೆ. ರೈಲು ಹಾದುಹೋದ ನಂತರ ತಂಡವು ಸಿಎಂ ಅವರನ್ನು ಕರೆದುಕೊಂಡು ಮುಂದೆ ಹೋಗಿದೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಭದ್ರತೆಯಲ್ಲಿ ಲೋಪ ಕಂಡು ಬಂದ ಬೆನ್ನಲ್ಲೇ ಅಧಿಕಾರಿಗಳ ವಿರುದ್ಧ ನಾಯ್ಡು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ…