ಕೋಟ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜನರ ಪ್ರಮುಖ ಆಹಾರವಾಗಿರುವ ಕುಚ್ಚಲಕ್ಕಿಯನ್ನು ಗುಣಮಟ್ಟದಲ್ಲಿ ಪಡಿತರದಾರರಿಗೆ ವಿತರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿಸಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಡಿ ಗುರುವಾರ ಸಿಎಂ ಬೊಮ್ಮಾಯಿಯವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಅವರು ಪ್ರಸ್ತಾವನೆಗೆ ಸಮ್ಮತಿಸಿದ್ದಾರೆ. ಕರಾವಳಿ ಜಿಲ್ಲೆಗಳ ಪಡಿತರದಾರರಿಗೆ ಗುಣಮಟ್ಟದ ಕುಚಲಕ್ಕಿ ವಿತರಣೆಗೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ.

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಪಡಿತರ ಮತ್ತು ಉತ್ತರ ಕನ್ನಡ ಜಿಲ್ಲೆಯ 5 ತಾಲೂಕುಗಳ ಪಡಿತರ ಚೀಟಿದಾರರಿಗೆ ಸಾರ್ವಜನಿಕ ವಿತರಣಾ ಪದ್ಧತಿಯ ಅಡಿ ಕುಚ್ಚಲಕ್ಕಿಯನ್ನು ವಿತರಿಸಲು ಅಗತ್ಯವಿರುವ 299.33 ಕೋಟಿ ಗಳಷ್ಟು ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಯವರು ಒಪ್ಪಿದ್ದು, ಯೋಜನೆ ಅನುಷ್ಠಾನದಿಂದ 6,21,804 ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಅನುಕೂಲವಾಗಲಿದೆ. ಪ್ರಸ್ತುತ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಯ ಪಡಿತರ ಚೀಟಿದಾರರಿಗೆ ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸುವ ಅಕ್ಕಿಯ ಪ್ರಮಾಣದಲ್ಲಿ ಶೇ. 50ರಷ್ಟು ಕುಚಲಕ್ಕಿ ವಿತರಣೆ ಮಾಡಲಾಗುತ್ತಿದೆ. ಈ ಅಕ್ಕಿಯನ್ನು ಭಾರತ ಆಹಾರ ನಿಗಮದಿಂದ ಎತ್ತುವಳಿ ಮಾಡಲಾಗುತ್ತಿದೆ. ಅದರೆ ಈ ಕುಚಲಕ್ಕಿಯಲ್ಲಿ ರುಚಿಯ ಪ್ರಮಾಣ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಕುಚಲಕ್ಕಿಯನ್ನು ಸ್ಥಳಿಯವಾಗಿ ಸರಕಾರವೇ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಿ ಅದರಿಂದ ಕುಚಲಕ್ಕಿಯನ್ನಾಗಿ ಪರಿವರ್ತಿಸಿ, ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ಚೀಟಿದಾರರಿಗೆ ವಿತರಿಸಿದರೆ, ಅದನ್ನು ಒಳ್ಳೆಯ ಆಹಾರವನ್ನಾಗಿ ಉಪಯೋಗಿಸಬಹುದು. ಇದರಿಂದ ಸ್ಥಳೀಯ ರೈತರಿಗೂ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿಯವರಿಗೆ ವಿವರಿಸಲಾಯಿತು.

ಮನವಿ ಆಲಿಸಿದ ಮುಖ್ಯಮಂತ್ರಿಯವರು ಪ್ರಸ್ತಾವನೆಗೆ ಸಮ್ಮತಿ ಸೂಚಿಸಿ ಸಂಬಂಧಿಸಿದ ಅನುದಾನ ಬಿಡುಗಡೆ ಮಾಡಲು ಒಪ್ಪಿದ್ದಾರೆ ಎಂದು ಸಚಿವ ಕೋಟ ತಿಳಿಸಿದ್ದಾರೆ.