ಅಮರಶಿಲ್ಪಿ ಜಕಣಾಚಾರಿ ವಿಶ್ವಮಾನ್ಯರು : ತಹಶೀಲ್ಧಾರ್ ಪ್ರಸಾದ್
ಹೆಬ್ರಿ : ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೆಯನ್ನು ಮಾಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ, ಅಮರಶಿಲ್ಪಿ ಜಕಣಾಚಾರಿ ವಿಶ್ವಕರ್ಮರಿಗೆ ಸೀಮಿತರಲ್ಲ, ಅವರು ವಿಶ್ವಮಾನ್ಯರು, ವಿಶ್ವಕರ್ಮರಿಗೆ ಮತ್ತು ದೇಶಕ್ಕೆ ಶಾಶ್ವತ ಕೊಡುಗೆಗಳನ್ನು ನೀಡುವ ಮೂಲಕ ನಿತ್ಯಸ್ಮರಣೀಯರಾಗಿದ್ದಾರೆ ಎಂದು ಹೆಬ್ರಿ ತಹಶೀಲ್ಧಾರ್ ಎಸ್.ಎ.ಪ್ರಸಾದ್ ಹೇಳಿದರು.
ಅವರು ಬುಧವಾರ ಹೆಬ್ರಿ ತಾಲ್ಲೂಕು ಕಚೇರಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಮರಶಿಲ್ಪಿ ಜಕಣಾಚಾರಿ ಅವರ ನೈಪುಣ್ಯ ಏನು ಎಂಬುದು ನಾವು ಅವರು ಕಟ್ಟಿದ ಸೋಮನಾಥ ದೇವಾಲಯ, ಬೇಲೂರು, ಹಳೆಬೀಡು, ಮತ್ತು ಕೈದಾಳ ಕ್ಷೇತ್ರವನ್ನು ಸಂದರ್ಶಿಸಬೇಕು, ವಿಶ್ವಕ್ಕೆ ಶ್ರೇಷ್ಠ ಶಿಲ್ಪವನ್ನು ನೀಡುವ ಮೂಲಕ ಕೀರ್ತಿಯನ್ನು ತಂದಿದ್ದಾರೆ. ಶ್ರೇಷ್ಠವಾದ ಭಯ ಭಕ್ತಿ ಶ್ರದ್ಧೆಯಿಂದ ಜಗತ್ತು ಮೆಚ್ಚುವ ಕೆತ್ತನೆಯನ್ನು ಮಾಡಿದ್ದಾರೆ. ಕುಶಲಕರ್ಮಿಗಳಾದ ವಿಶ್ವಕರ್ಮರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಕುಲಕಸುಬಿನ ಜೊತೆಗೆ ಆಡಳಿತ ವ್ಯವಸ್ಥೆ ಸೇರಿ ಸಮಾಜದ ಮುಖ್ಯವಾಹಿನಿಯ ಕೆಲಸಗಳಲ್ಲೂ ತೊಡಗಿಸಿಕೊಳ್ಳಲು ಪ್ರೇರಣೆ ನೀಡಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ವಿದ್ವಾನ್ ಹೆಬ್ರಿ ಚಂದ್ರಕಾಂತ್ ಪುರೋಹಿತ್ ಮಾತನಾಡಿ ಸರ್ಕಾರದಿಂದ ಪರಮ ಶ್ರೇಷ್ಠ ಶಿಲ್ಪಿ ಜಕಣಾಚಾರಿ ಸಂಸ್ಮರಣೆ ನಡೆಸುತ್ತಿರುವುದೇ ನಮ್ಮೇಲ್ಲರ ಭಾಗ್ಯ. ಸರ್ಕಾರದ ಕೆಲಸ ಸರ್ವಶ್ರೇಷ್ಠ ನಾವೇಲ್ಲರು ಭಾಗವ್ಯವಂತರು ಎಂದರು. ವಿಶ್ವಕರ್ಮ ಸಜಾಮದ ಮುಖಂಡ ಹೆಬ್ರಿ ಟಿ.ಜಿ.ಆಚಾರ್ಯ, ಹೆಬ್ರಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮಕೃಷ್ಣ ಆಚಾರ್ಯ ಹೆಬ್ರಿ, ಗೌರವಾಧ್ಯಕ್ಷ ರತ್ನಾಕರ ಆಚಾರ್ಯ ಶಿವಪುರ, ಉಪಾಧ್ಯಕ್ಷ ಮುದ್ರಾಡಿ ಕೇಶವ ಆಚಾರ್ಯ, ಹೆಬ್ರಿಯ ವಿಶ್ವಕರ್ಮ ಸಮುದಾಯದ ಮುಖಂಡರಾದ ಎಂ.ಪಿ.ಜಯರಾಮ ಆಚಾರ್ಯ, ಪ್ರೇಮಾ ಎಂ ವರಂಗ, ಕಲಾವತಿ ಶ್ರೀಧರ ಆಚಾರ್ಯ, ಸುಕುಮಾರ್ ಮುನಿಯಾಲ್, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಟಿ.ಜಿ.ಆಚಾರ್ಯ ನಿರೂಪಿಸಿ ಸ್ವಾಗತಿಸಿ ಪ್ರೇಮಾ ಎಂ ವಂದಿಸಿದರು.